ಇಂದು ಏಪ್ರಿಲ್ 1. ಪ್ರತಿ ವರ್ಷವೂ ಏಪ್ರಿಲ್ 1ನ್ನು ಮೂರ್ಖರ ದಿನಾಚರಣೆಯಾಗಿ ಆಚರಿಸುತ್ತಾರೆ. ಏಪ್ರಿಲ್ ಫೂಲ್ ಯಾಕೆ ಆಚರಿಸುತ್ತಾರೆ ಎನ್ನುವುದಕ್ಕೆ ಒಬ್ಬೊಬ್ಬರೂ ಒಂದೊಂದು ಕಾರಣಗಳನ್ನು ನೀಡುತ್ತಾರೆ. ಆದ್ರೆ ತಮಾಷೆಯ ಪ್ರಜ್ಞೆ ಬೆಳೆಸಲು ಈ ದಿನ ಬಳಕೆಯಾಗುತ್ತಿದೆ. ಕೆಲವೊಮ್ಮೆ ತಮಾಷೆಗಳು ಅತಿರೇಕಕ್ಕೆ ಹೋದರೆ, ದುಃಖಕರ ಸನ್ನಿವೇಶಗಳನ್ನೂ ಎದುರಿಸುವಂತಹ ಸನ್ನಿವೇಶಗಳು ಪ್ರತಿ ವರ್ಷವೂ ಸಂಭವಿಸುತ್ತಲೇ ಇರುತ್ತದೆ.
ಏಪ್ರಿಲ್ ಫೂಲ್ ಕೇವಲ ಒಂದು ದಿನದ ತಮಾಷೆಯ ದಿನ. ಆದ್ರೆ ನಾವು ಪ್ರತಿ ದಿನವೂ ಯಾವುದಾದರೂ ಒಂದು ವಿಷಯದಲ್ಲಿ ಫೂಲ್ ಆಗುತ್ತಲೇ ಇರುತ್ತೇವೆ. ನಾವು ಬೇರೆಯವರ ಮೇಲೆ ವಿಶ್ವಾಸ ನಂಬಿಕೆ ಇಟ್ಟಿರುತ್ತೇವೆ. ಆದರೆ ಅವರು ತಮ್ಮ ಸ್ವಾರ್ಥಕ್ಕೆ ನಮ್ಮ ನಂಬಿಕೆಗಳನ್ನು ಬಲಿ ಕೊಡುತ್ತಾರೆ. ಸುಳ್ಳು ಹೇಳುತ್ತಾರೆ. ಯಜಮಾನನ ಮೇಲೆ ನಿಷ್ಠೆಯಿಂದ ಕೆಲಸ ಮಾಡುವ ಕೆಲಸಗಾರ, ಕೆಲಸಗಾರನ ಮೇಲೆ ನಂಬಿಕೆ ಇಡುವ ಯಜಮಾನ, ಮಕ್ಕಳ ಮೇಲೆ ನಂಬಿಕೆ ಇಡುವ ಪೋಷಕರು, ಪೋಷಕರ ಮೇಲೆ ನಂಬಿಕೆ ಇಡುವ ಮಕ್ಕಳು, ಸ್ನೇಹಿತರ ಮೇಲೆ ನಂಬಿಕೆ ಇಡುವ ಸ್ನೇಹಿತರು ಹೀಗೆ ನಂಬಿಕೆಗಳ ಮೇಲೆ ನಿಂತಿರುವ ಪ್ರಪಂಚದಲ್ಲಿ ಮೋಸ ಎನ್ನುವುದು ನಿರಂತರವಾಗಿ ಇದ್ದೇ ಇದೆ. ಹಾಗಾಗಿ ಬದುಕಿನ ಉದ್ದಕ್ಕೂ ನಾವು ಆಗಾಗ ಫೂಲ್ ಗಳಾಗುತ್ತಲೇ ಇರುತ್ತೇವೆ.
ಕೆಲವೊಂದು ಬಾರಿ ಇನ್ನೇನು ಜೀವನದಲ್ಲಿ ಎದ್ದು ನಿಲ್ಲುತ್ತೇವೆ ಅನ್ನೋವಷ್ಟರಲ್ಲಿ ನಮ್ಮ ಅದೃಷ್ಟ ಕೈಕೊಡುತ್ತವೆ. ದೇವರೂ ಕೆಲವೊಮ್ಮೆ ನಮ್ಮನ್ನು ಫೂಲ್ ಮಾಡಿದರೇ ಎನ್ನುವ ಬೇಸರ ಭಕ್ತರಲ್ಲಿ ಮೂಡುತ್ತದೆ.
ಯಾರ ಮೇಲೆ ನಾವು ಅತಿಯಾಗಿ ನಂಬಿಕೆ ಇಡುತ್ತೇವೆಯೋ, ಯಾರಿಗೆ ಅತಿಯಾದ ವಿಶ್ವಾಸವನ್ನು ತೋರಿಸುತ್ತೇವೆಯೋ, ಅವರು ಇಲ್ಲ ಸಲ್ಲದ ಭರವಸೆಗಳನ್ನು ಮೂಡಿಸಿ ಕೊನೆಗೆ ಏನೂ ಇಲ್ಲ ಎನ್ನುವಾಗ ನಾವು ಫೂಲ್ ಆಗಿ ಬಿಟ್ಟಿದ್ದೇವೆ ಅನ್ನಿಸುತ್ತದೆ.
ರಾಜಕೀಯ ವ್ಯಕ್ತಿಗಳು, ಆಶ್ವಾಸನೆಗಳ ಸುರಿಮಳೆ ಸುರಿಸಿ ಚುನಾವಣೆಯನ್ನು ಗೆದ್ದು ಸರ್ಕಾರ ಮಾಡುತ್ತಾರೆ. ಕೊಟ್ಟ ಆಶ್ವಾಸನೆಯನ್ನು ಪೂರೈಸದೇ ನಂಬಿಕೆ ದ್ರೋಹ ಮಾಡಿದಾಗ, ನಾವು ಫೂಲ್ ಗಳು ಎಂದೆನಿಸುತ್ತದೆ. ಒಟ್ಟಿನಲ್ಲಿ ಏಪ್ರಿಲ್ ಫೂಲ್ ಅನ್ನೋದು ಒಂದು ದಿನದ ತಮಾಷೆ ಆದ್ರೆ ಪ್ರತಿ ದಿನವೂ ನಾವು ಫೂಲ್ ಗಳಾಗುತ್ತಿರುತ್ತೇವೆ. ಕೆಲವರು ಹೇಳುತ್ತಾರೆ. ದುಷ್ಟ ಶಕ್ತಿಗಳು ಇದೆ ಎಂದಾದರೆ, ದೇವರು ಕೂಡ ಇದ್ದಾರೆ, ಅಥವಾ ನೆಗೆಟಿವ್ ಇದ್ರೆನೇ ಪಾಸಿಟಿವ್ ಅಂತಾರೆ. ಹಾಗೆಯೇ ಮೋಸ ಇದ್ರೆನೇ ಪ್ರಾಮಾಣಿಕತೆ ಎನ್ನುವುದು ಇರಲು ಸಾಧ್ಯ, ನಿಜ ಜೀವನದಲ್ಲಿ ನಾವೂ ಫೂಲ್ ಮಾಡದಿರೋಣ, ಬೇರೆಯವರಿಂದಲೂ ಫೂಲ್ ಆಗದಿರೋಣ…
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4