ತುಮಕೂರು: ಚಿಕ್ಕನಾಯಕನಹಳ್ಳಿಯ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ತೇಜಸ್ವಿನಿ ಬಿ. ಅವರು ಅತ್ಯಂತ ಹಿಂದುಳಿದ ವರ್ಗಗಳಾದ ಅಲೆಮಾರಿ ಜನಾಂಗ ಸುಡುಗಾಡು ಸಿದ್ದರು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ನಮಗೆ ಕೊಡುವಂತೆ ಮತ್ತು ಪರಿಹಾರಗಳನ್ನು ಒದಗಿಸುವಂತೆ ತಹಸೀಲ್ದಾರ್ ಕಚೇರಿಗೆ ತೆರಳಿ ಕೇಳಲು ಹೋದಾಗ ನಿಂದಿಸಿ ಕಚೇರಿಯಿಂದ ಹೊರದಬ್ಬಿರುವ ಘಟನೆ ಇದೀಗ ತೀವ್ರತೆ ಪಡೆದುಕೊಂಡಿದೆ.
ತಹಸೀಲ್ದಾರ್ ತೇಜಸ್ವಿನಿ ಬಿ. ಅವರು, ನ್ಯಾಯ ಕೇಳಲು ಬಂದಿದ್ದ ಅಮಾಯಕ, ಅನಕ್ಷರಸ್ಥ ಹಿಂದುಳಿದ ವರ್ಗದ ಜನರನ್ನು ಪೋಲಿಸ್ ಕರೆಸಿ ಕಚೇರಿಯಿಂದ ಹೊರ ನೂಕಲು ಪ್ರಯತ್ನಿಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೇ ರೌಡಿಶೀಟರ್ ಹಾಕುವುದಾಗಿ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಗಳನ್ನು ಬ್ಲಾಕ್ ಮಾಡಿ ಹೇಳಿ ಗಡಿಪಾರು ಮಾಡುವ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ತಹಸೀಲ್ದಾರ್ ವರ್ತನೆಯಿಂದ ನೊಂದ ವ್ಯಕ್ತಿಗಳು ಸಾಮಾಜಿಕ ಹೋರಾಟಗಾರ ಹಂದ್ರಾಳು ನಾಗಭೂಷಣ ಅವರನ್ನು ಸಂಪರ್ಕಿಸಿದ್ದು, ಅವರ ನೇತೃತ್ವದಲ್ಲಿ ತೇಜಸ್ವಿ ಬಿ. ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಲು ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಹೀಗೆ ಹತ್ತು ಹಲವು ಕಚೇರಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಸುತ್ತಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಇದೀಗ ತಹಶೀಲ್ದಾರ್ ತೇಜಸ್ವಿನಿ ಬಿ. ಅವರ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಜನಾಂಗಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 2015ರ ಪ್ರಕಾರ, ಪ್ರಕರಣ ದಾಖಲಾದ ತಕ್ಷಣ ತಹಸೀಲ್ದಾರ್ ರವರು ರಜೆಯ ಮೇಲೆ ತೆರಳಿರುವ ಘಟನೆ ನಡೆದಿದೆ.
ಈ ಪ್ರಕರಣದ ತನಿಖಾಧಿಕಾರಿ ಡಿಎಸ್ಪಿ ತಿಪಟೂರು ಇವರು ತೇಜಸ್ವಿನಿ ಬಿ. ಅವರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸುವ ಪ್ರಕ್ರಿಯೆ ಮಾಡಬೇಕಾಗಿದ್ದರೂ ಇನ್ನೂ ಮೌನಕ್ಕೆ ಶರಣಾಗಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸುವಲ್ಲಿ ಕರ್ತವ್ಯಲೋಪ ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡು ದೌರ್ಜನ್ಯಗಳಿಂದ ಆಡಳಿತ ನಡೆಸುತ್ತಿರುವುದು ಖಂಡಿಸಿರುವ ಹಿರಿಯ ಸಾಮಾಜಿಕ ಹೋರಾಟಗಾರರಾದ ಹೆಚ್ ಎಂ. ವೆಂಕಟೇಶರವರು ವಿಷಾದ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕಾನೂನುಗಳನ್ನು ಪಾಲನೆ ಮಾಡುವ ಮೂಲಕ ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy