ಬೆಂಗಳೂರು/ಬೆಳಗಾವಿ: ಕರ್ನಾಟಕ ರಾಜ್ಯಾದ್ಯಂತ ಡಿಸೆಂಬರ್ 21ರ ಭಾನುವಾರದಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಐದು ವರ್ಷದೊಳಗಿನ ಸುಮಾರು 62.40 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನ್ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತವು ಈಗಾಗಲೇ ಪೋಲಿಯೋ ಮುಕ್ತ ದೇಶವಾಗಿದ್ದರೂ, ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಬೂತ್ ಮತ್ತು ಮನೆ ಭೇಟಿ: ಡಿಸೆಂಬರ್ 21ರಂದು ರಾಜ್ಯದ ಲಸಿಕಾ ಕೇಂದ್ರಗಳಲ್ಲಿ (ಬೂತ್‌ಗಳಲ್ಲಿ) ಹನಿ ಹಾಕಲಾಗುವುದು. ನಂತರದ 2-3 ದಿನಗಳ ಕಾಲ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಬಿಟ್ಟುಹೋದ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ.
ವ್ಯಾಪಕ ಸಿದ್ಧತೆ: ಈ ಕಾರ್ಯಕ್ರಮಕ್ಕಾಗಿ ರಾಜ್ಯಾದ್ಯಂತ 33,258 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1.13 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕುವ ಸಿಬ್ಬಂದಿ ಹಾಗೂ 7,322 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.
ವಿಶೇಷ ತಂಡಗಳು: ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಲಸೆ ಕಾರ್ಮಿಕರು ಇರುವ ಪ್ರದೇಶಗಳ ಮೇಲೆ ನಿಗಾ ವಹಿಸಲು 1,030 ಸಂಚಾರಿ ತಂಡಗಳು ಮತ್ತು 2,096 ಟ್ರಾನ್ಸಿಟ್ ತಂಡಗಳನ್ನು ರಚಿಸಲಾಗಿದೆ.
ಪೋಲಿಯೋ ಹನಿಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಚಿವರು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆ ಲಸಿಕೆ ಪಡೆದಿದ್ದರೂ ಸಹ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸುವುದು ಕಡ್ಡಾಯವಾಗಿದೆ. ಪೋಷಕರು ಹತ್ತಿರದ ಲಸಿಕಾ ಕೇಂದ್ರದ ಮಾಹಿತಿ ಪಡೆಯಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


