ನವದೆಹಲಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಈ ವರದಿಗಳು ಸಂಪೂರ್ಣವಾಗಿ ‘ಅವೈಜ್ಞಾನಿಕ ಮತ್ತು ಆಧಾರರಹಿತ’ ಎಂದು ಹೇಳಿದೆ.
ಇತ್ತೀಚೆಗೆ ‘ಎಗ್ಗೋಜ್ ನ್ಯೂಟ್ರಿಷನ್’ ಕಂಪನಿಯ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಾಧಿಕಾರವು, ದೇಶದಲ್ಲಿ ಲಭ್ಯವಿರುವ ಮೊಟ್ಟೆಗಳು ಸೇವನೆಗೆ ಸುರಕ್ಷಿತವಾಗಿವೆ ಎಂದು ತಿಳಿಸಿದೆ. ಆಹಾರ ಸುರಕ್ಷತಾ ನಿಯಮ 2011ರ ಅಡಿಯಲ್ಲಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯಲ್ಲಿ ಕ್ಯಾನ್ಸರ್ ಕಾರಕ ಎನ್ನಲಾದ ‘ನೈಟ್ರೋಫ್ಯೂರಾನ್’ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಒಂದೆರಡು ಅಪೂರ್ಣ ಸಂಶೋಧನೆಗಳನ್ನು ಇಟ್ಟುಕೊಂಡು ಮೊಟ್ಟೆ ಅಸುರಕ್ಷಿತ ಎಂದು ನಿರ್ಧರಿಸುವುದು ಸರಿಯಲ್ಲ. ಮೊಟ್ಟೆಯು ಪೌಷ್ಟಿಕಾಂಶಯುತ ಮತ್ತು ಸಮತೋಲಿತ ಆಹಾರದ ಭಾಗವಾಗಿದೆ. ಹೀಗಾಗಿ ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಎಂದು ಎಫ್‌ಎಸ್‌ಎಸ್‌ಎಐ ಮನವಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


