ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ನಾಯಕತ್ವ’ ಹಾಗೂ ‘ಅಧಿಕಾರ ಹಂಚಿಕೆ’ (Power Sharing) ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸ್ವಾರಸ್ಯಕರ ವಾಗ್ವಾದ ನಡೆಯಿತು.
ಸಿಎಂ ಸಿದ್ದರಾಮಯ್ಯ ವ್ಯಂಗ್ಯ: ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರ ಕಾಲೆಳೆಯುತ್ತಾ, “ನನಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಆಗುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಮ್ಮ ನಡುವೆ ಹಾಲಾಹಲ ಇದೆ ಎನ್ನುತ್ತಿದ್ದಾರೆ,” ಎಂದು ನಗುತ್ತಲೇ ಡಿಕೆಶಿ ಕಡೆ ನೋಡಿ ಹೇಳಿದರು.
ಸಮಯವೇ ಉತ್ತರ ನೀಡಲಿದೆ: ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಎಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ ಬಿಡಿ,” ಎಂದು ಮಾರ್ಮಿಕವಾಗಿ ನುಡಿದರು.
ಆರ್. ಅಶೋಕ್ ಲೇವಡಿ: ಡಿಕೆಶಿ ಹೇಳಿಕೆಯನ್ನು ಹಿಡಿದು ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, “ಇದು ಡಿಕೆಶಿ ಅವರ ಸ್ಟೈಲ್. ಒಂದು ಮಾತಿಗೆ ನೂರು ಅರ್ಥವಿರುತ್ತದೆ. ಆ ಸಮಯ ಯಾವಾಗ ಬರುತ್ತದೆ ಎಂದು ಅವರೇ ಹೇಳಬೇಕು,” ಎಂದರು. ಅಲ್ಲದೆ, ಡಿಕೆಶಿ ಪರ 56 ಶಾಸಕರಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರಸ್ತಾಪಿಸಿ ಸಚಿವ ಸಂತೋಷ್ ಲಾಡ್ ಕಾಲೆಳೆದರು.
ಡಿಕೆಶಿ ಸ್ಪಷ್ಟನೆ: ಅಶೋಕ್ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, “ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣದಲ್ಲಿ ಏಟು ತಿಂದು ಬೆಳೆದವನು. ಸಿದ್ದರಾಮಯ್ಯ ಅವರೂ ಸೇರಿ ನನಗೆ 136 ಶಾಸಕರ ಬಲವಿದೆ. ನಾವು ಯಾವಾಗಲೂ ಜೋಡಿಯಾಗಿಯೇ ಇರುತ್ತೇವೆ. ಹೈಕಮಾಂಡ್ ತೀರ್ಮಾನ ಮಾಡುವುದು ಅವರಿಗೆ ಬಿಟ್ಟಿದ್ದು. ಒಬ್ಬ ಮನುಷ್ಯ ಧೈರ್ಯವಾಗಿ ನಿಂತರೆ ಅದೇ ಬಹುಮತ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಈ ಚರ್ಚೆಯ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ಆರ್. ಅಶೋಕ್ ನಡುವೆ ಕೂಡ ಮಾತಿನ ಚಕಮಕಿ ನಡೆಯಿತು. ಒಟ್ಟಾರೆಯಾಗಿ, ಕಾಂಗ್ರೆಸ್‌ನ ಆಂತರಿಕ ಅಧಿಕಾರ ಹಂಚಿಕೆಯ ವಿಚಾರ ಇಂದು ಸದನದಲ್ಲಿ ಭಾರಿ ಕುತೂಹಲ ಮೂಡಿಸಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


