ಬೆಂಗಳೂರು: ದಶಕಗಳ ಕಾಲದ ಕನಸಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆಯ ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ವಿಧಾನಸಭೆಯ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರದ ಈ ಧೋರಣೆಯಿಂದಾಗಿ ಬಯಲು ಸೀಮೆಯ ಜನರಿಗೆ ನೀರು ತಲುಪಿಸುವ ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂದು ದೂರಿದರು.
ಕೇಂದ್ರದ ವಿರುದ್ಧ ಕಿಡಿ: “ನಾವು ಈ ದೇಶದ ಪ್ರಜೆಗಳಲ್ಲವೇ? ನಮ್ಮ ಹಕ್ಕನ್ನು ಕೇಳಲು ನಮಗೆ ಅಧಿಕಾರವಿದೆ. ಪ್ರತಿಯೊಂದು ನೀರಾವರಿ ಯೋಜನೆಗೂ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಮಹದಾಯಿ ಯೋಜನೆಗೆ ಇಂದಿನವರೆಗೂ ಪೂರ್ಣ ಪ್ರಮಾಣದ ಅವಕಾಶ ಕೊಟ್ಟಿಲ್ಲ, ಈಗ ಎತ್ತಿನಹೊಳೆ ಯೋಜನೆಗೂ ಇದೇ ಪರಿಸ್ಥಿತಿ ಬಂದೊದಗಿದೆ,” ಎಂದು ಶಿವಲಿಂಗೇಗೌಡ ಕಿಡಿಕಾರಿದರು. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ: ಈ ವಿಷಯದ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, “ಎತ್ತಿನಹೊಳೆ ಯೋಜನೆಗೆ ಬೇಕಾದ ಅರಣ್ಯ ಭೂಮಿಯ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೇಳಿದ್ದ ಎಲ್ಲಾ ಸ್ಪಷ್ಟೀಕರಣಗಳನ್ನು ರಾಜ್ಯ ಸರ್ಕಾರ ನೀಡಿದೆ. ಎಲ್ಲಾ ಷರತ್ತುಗಳನ್ನು ನಾವು ಪೂರೈಸಿದ್ದೇವೆ. ಆದಷ್ಟು ಬೇಗ ಕೇಂದ್ರವು ಈ ಯೋಜನೆಗೆ ಅಂತಿಮ ಅನುಮೋದನೆ ನೀಡಬೇಕು,” ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಇಂಧನ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ಗುತ್ತಿಗೆದಾರರ ಹಿಡಿತದ ಬಗ್ಗೆ ಪ್ರಸ್ತಾಪಿಸಿ, ಇಲಾಖೆ ಅನುಭವಿಸುತ್ತಿರುವ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


