ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಗಲಾಟೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ನಾಯ್ಕ್ ಅವರ ಪತ್ನಿ ಸುಚಿತ್ರಾ, ಸಿದ್ದಾಪುರದಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದರು. ಈ ಸಮಯದಲ್ಲಿ ಆಕೆಗೆ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿ, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಕಮಲಾಕರ್ ಭಟ್ ಆಗಾಗ ಸುಚಿತ್ರಾ ಮನೆಗೆ ಬಂದು ಹೋಗುತ್ತಿದ್ದನು. ಈ ವಿಚಾರ ತಿಳಿದ ಹಿರಿಯ ಮಗಳು ತನ್ನ ತಂದೆ ಮಹೇಶ್ ನಾಯ್ಕ್‌ಗೆ ಮಾಹಿತಿ ನೀಡಿದ್ದಾಳೆ.
ಇದರಿಂದ ಕೆರಳಿದ ಮಹೇಶ್ ನಾಯ್ಕ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿದ ನಂತರ ಅವರು ತಮ್ಮ ಸಹೋದರ ವಸಂತ್ ನಾಯ್ಕ್ ಅವರ ಮನೆಗೆ ತೆರಳಿದ್ದರು. ತಮ್ಮ ವಿರುದ್ಧ ದೂರು ನೀಡಿದ ವಿಷಯ ತಿಳಿದ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಸಹಚರರೊಂದಿಗೆ ವಸಂತ್ ನಾಯ್ಕ್ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಹೇಶ್ ನಾಯ್ಕ್, ವಸಂತ್ ನಾಯ್ಕ್ ಮತ್ತು ಕುಮಾರ್ ಎಂಬುವವರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವಸಂತ್ ನಾಯ್ಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಕಾರ್ಯಾಚರಣೆ: ಕೊಲೆ ನಡೆದ ನಂತರ ಪರಾರಿಯಾಗಲು ಯತ್ನಿಸಿದ ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿದಂತೆ ನಾಲ್ವರನ್ನು ಸಿದ್ದಾಪುರದಲ್ಲಿ ಬಂಧಿಸಲಾಗಿದೆ. ಉಳಿದ ಮೂವರನ್ನು ಶಿವಮೊಗ್ಗದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಪೊಲೀಸರು ಎಲ್ಲರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


