ಹಾವೇರಿ: ರಾಜ್ಯ ರಾಜಕೀಯದಲ್ಲಿ ಸದಾ ಚರ್ಚೆಯ ವಿಷಯವಾಗಿರುವ ‘ಅಧಿಕಾರ ಹಂಚಿಕೆ’ ಅಥವಾ ‘ಅಧಿಕಾರ ಹಸ್ತಾಂತರ’ದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸರ್ಕಾರದ ‘ಸಾಧನಾ ಸಮಾವೇಶ’ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. “ಅಧಿಕಾರ ಹಂಚಿಕೆಯ ಬಗ್ಗೆ ನಾನು ಈಗಾಗಲೇ ಮಾತನಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಆದರೂ ನೀವು ಯಾಕೆ ಪದೇ ಪದೇ ಅದೇ ಪ್ರಶ್ನೆಯನ್ನು ಕೇಳುತ್ತೀರಿ?” ಎಂದು ಮಾಧ್ಯಮದವರ ವಿರುದ್ಧ ಆಕ್ರೋಶ ಹೊರಹಾಕಿದರು.
ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಶ್ರಮಕ್ಕೆ ತಕ್ಕ ಫಲ ಸಿಗಲಿದೆ” ಎಂದು ಮಾಡಿದ್ದ ಟ್ವೀಟ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಹೈಕಮಾಂಡ್ ಏನಾದರೂ ಟ್ವೀಟ್ ಮಾಡಿದೆಯಾ?” ಎಂದು ಮರುಪ್ರಶ್ನೆ ಹಾಕುವ ಮೂಲಕ ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಸಂದೇಶ ನೀಡಿದರು.
ಇದೇ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು. ಒಟ್ಟಾರೆಯಾಗಿ, ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಿದ್ದರಾಮಯ್ಯ ಅವರು ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


