ಬೀದರ್: ಜಿಲ್ಲೆಯ ಅನಾಥ ಹಾಗೂ ಪಾಲನೆ–ಪೋಷಣೆಯಿಂದ ವಂಚಿತರಾದ ಮಕ್ಕಳಿಗೆ ಕೌಟುಂಬಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ಪೋಷಕತ್ವ ಯೋಜನೆ’ (Foster Care Scheme) ಅತ್ಯಂತ ಪರಿಣಾಮಕಾರಿಯಾಗಿದೆ. ಈ ಯೋಜನೆಯ ಲಾಭ ಅರ್ಹ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ಬೀದರ್ ಜಿಲ್ಲೆಯ ಕೋಸಂ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗಾಗಿ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಬೀದರ್, ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಡಾನ್ ಬೋಸ್ಕೋ ಪೋಷಕತ್ವ ಯೋಜನೆಯ ಸಂಯೋಜಕ ರಮೇಶ್ , ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ಮಗುವನ್ನು ತಾತ್ಕಾಲಿಕವಾಗಿ (ಗರಿಷ್ಠ 2 ವರ್ಷ ಅಥವಾ ವಿಸ್ತರಿಸಲ್ಪಟ್ಟ ಅವಧಿ) ಪಾಲನೆಗಾಗಿ ನೀಡಲಾಗುತ್ತದೆ. ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಈ ಯೋಜನೆಯಡಿ ಮಗುವಿನ ರಕ್ಷಣೆ ಮತ್ತು ಪೋಷಣೆಗೆ ಅವಕಾಶವಿದೆ. : ಅನಾಥ ಅಥವಾ ಕುಟುಂಬದ ಕಾಳಜಿಯಿಂದ ವಂಚಿತರಾದ ಮಕ್ಕಳಿಗೆ ಸಂಸ್ಥೆಗಳಿಗಿಂತ ಹೆಚ್ಚಾಗಿ ಕೌಟುಂಬಿಕ ವಾತಾವರಣದಲ್ಲಿ ಬೆಳೆಯುವ ಅವಕಾಶ ಕಲ್ಪಿಸುವುದು ಇದರ ಮೂಲ ಉದ್ದೇಶ ಅಂತಾ ತಿಳಿಸಿದರು.
ಶಿಕ್ಷಕರಿಗೆ ದತ್ತು ಸ್ವೀಕಾರ ಮತ್ತು ಪೋಷಕತ್ವದ ನಡುವಿನ ವ್ಯತ್ಯಾಸದ ಬಗ್ಗೆ ಅರಿವು ಮೂಡಿಸಲಾಯಿತು. ದತ್ತು ಎಂಬುದು ಶಾಶ್ವತ ಪ್ರಕ್ರಿಯೆಯಾದರೆ, ಪೋಷಕತ್ವವು ಮಗುವಿಗೆ ತಾತ್ಕಾಲಿಕವಾಗಿ ಪರಿವಾರದ ಪ್ರೀತಿ ಮತ್ತು ಕಾಳಜಿಯನ್ನು ಒದಗಿಸುವ ವ್ಯವಸ್ಥೆಯಾಗಿದೆ ಎಂದು ರಮೇಶ್ ತಿಳಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೋ ಬೀದರ್ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಲಾರೆನ್ಸ್, ಶಾಲೆಯ ಮುಖ್ಯ ಗುರುಗಳಾದ ರಾಜಕುಮಾರ್ ಹಾಗೂ ಶಾಲೆಯ ಇತರ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


