ತುಮಕೂರು: ಪಾವಗಡ ಪಟ್ಟಣದ ಶನಿಮಹಾತ್ಮ ದೇವಾಲಯದ ಬಳಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.
ಜು.2 ರಂದು ಸಂಜೆ 5.30ರ ಸಮಯದಲ್ಲಿ ಮಡಕಶಿರಾದ ಖಾಸಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮುಗಿಸಿ ಪಳವಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ನಾಗಲಕ್ಷ್ಮಿ ಎಂಬ ಮಹಿಳೆಯನ್ನು ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅಡ್ಡಗಟ್ಟಿ ಆಕೆಯ ಮೇಲೆ ಹಲ್ಲೆ ನಡೆಸಿ ಕಿವಿಯ ಜುಮುಕಿ ಹಾಗೂ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ನಾಗಲಕ್ಷ್ಮಿ ಅವರನ್ನು ಸ್ಥಳೀಯರು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಪ್ರಕರಣ ದಾಖಲಿಸಿದ್ದ ಪಾವಗಡ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿ, ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಗೊಲ್ಲಪಳ್ಳಿ ಗ್ರಾಮದ ನಿವಾಸಿ ನಾಗಪ್ಪ ಅವರ ಪುತ್ರ ಮಂಜುನಾಥ್ (35) ಎಂಬಾತನನ್ನು ಬಂಧಿಸಿದ್ದಾರೆ.
ಸದರಿ ಆರೋಪಿ ಗಾರೆ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದ್ದು, ಪಾವಗಡದ ಬಸ್ ನಿಲ್ದಾಣದ ಬಳಿ ಸ್ಥಳ ಮಹಜರು ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸುರೇಶ್ ಅವರ ಮಾರ್ಗದರ್ಶನದಲ್ಲಿ ಎಸ್ಐ ಸುಧೀರ್, ಸುನಿಲ್, ಎಎಸ್ಐ ತಿಮ್ಮರಾಜು ಹಾಗೂ ಸಿಬ್ಬಂದಿಗಳಾದ ಗೋಪಿ, ಶಿವಶಂಕರ್, ಸಂಪತ್, ದೀಪಕ್, ಮಾರುತಿ ಮತ್ತು ಮಂಥೇಶ್ ಅವರುಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


