ಕಾರವಾರ: ಜೀತ ಪದ್ದತಿ ನಿಷೇಧ ಕಾಯ್ದೆಯು 1976 ರಲ್ಲಿ ಜಾರಿಗೆ ಬಂದು 50 ವರ್ಷ ಕಳೆದರೂ ಸಹ ದೇಶದಲ್ಲಿ ಜೀತ ಪದ್ದತಿ ಇನ್ನೂ ಕಂಡುಬರುತ್ತಿದ್ದು, ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನೆಮ್ಮಲ್ಲರ ಜವಾಬ್ದಾರಿಯಾಗಿದ್ದು, ಜೀತ ಪದ್ದತಿಯಲ್ಲಿ ತೋಡಗಿಕೊಂಡು ಸಂಕಷ್ಟಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ದಿವ್ಯಶ್ರೀ ಸಿ.ಎಂ. ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ, ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಹಾಗೂ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.
ಬಡತನ, ಶಿಕ್ಷಣ, ನಿರುದ್ಯೋಗ, ಸಾಲದ ಸುಳಿವು, ಜಾತಿ ಪದ್ದತಿ, ಕಾನೂನಿನ ಅರಿವುವಿಲ್ಲದೇ ಇರುವುದರಿಂದ ಜೀತ ಪದ್ದತಿಯ ಶೋಷಣೆಗೆ ಒಳಗಾಗುತ್ತಿದ್ದು, ಜೀತ ಪದ್ದತಿಗೆ ಒಳಗಾದವರನ್ನು ರಕ್ಷಿಸಿ ಅವರಿಗೆ ಆರ್ಥಿಕ ನೆರವು, ವಸತಿ , ಕೌಶಲ್ಯಾಭಿವೃದ್ದಿ ತರಬೇತಿ, ಅವರ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು. ಈ ಪದ್ದತಿಯನ್ನು ನಿರ್ಮೂಲಣೆ ಮಾಡುವ ಜವಾಬ್ದಾರಿ ಹೊಂದಿರುವ ಎಲ್ಲರೂ ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕು, ಜೀತ ಪದ್ದತಿ ತಪಾಸಣೆಗೆ ಹೋದ ಸಂದರ್ಭದಲ್ಲಿ ಮಾಲೀಕರಿಗೆ ಕಾರ್ಮಿಕರನ್ನು ಜೀತ ಪದ್ದತಿಯಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಸಿ, ಕಾಯ್ದೆ, ಕಾನೂನಿನ ಅರಿವು, ಶಿಕ್ಷೆಯ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಾಗಾರದಲ್ಲಿ ಜೀತ ಪದ್ದತಿಯ ಕುರಿತಂತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕ್ರಿಸ್ಟೋಫರ್ ಸ್ಟಾö್ಯನಿ ಮಾತನಾಡಿ, ಶೋಷಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸಿದ್ದರೂ ಕೂಡ ಜೀತ ಪದ್ದತಿಯು ರಾಜ್ಯದಲ್ಲಿ ಹಲವೆಡೆ ಈಗಲೂ ಜೀವಂತವಾಗಿದೆ, ಜೀತ ಪದ್ದತಿಯ ಸ್ವರೂಪದ ಬಗ್ಗೆ ಅಧಿಕಾರಿಗಳು ವಿವರವಾಗಿ ತಿಳಿದುಕೊಳ್ಳಬೇಕು. ಇದರಲ್ಲಿ ಜನರ ಶೋಷಣೆ ನಡೆಯುತ್ತಿದ್ದು, ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಯನ್ನು ದುರುಪಯೋಗ ಪಡೆದುಕೊಂಡು ಜೀತ ಪದ್ದತಿಗೆ ಒಳಪಡಿಸಲಾಗುತ್ತದೆ. ಮಾನವ ಕಳ್ಳ ಸಾಗಾಣಿಕೆಗೆ ಕೂಡಾ ಇದು ಕಾರಣವಾಗಿದೆ. ಆದ್ದರಿಂದ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಜೀತ ಪದ್ದತಿಯ ಬಗ್ಗೆ ಪರಿಶೀಲಿಸಿ, ಇದನ್ನು ತಡೆಯಲು ಆತ್ಮ ಸಾಕ್ಷಿಯಾಗಿ, ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಪ್ರಸ್ತುತ ಇಟ್ಟಿಗೆ ಬಟ್ಟಿಗಳು, ರಸ್ತೆ ಬದಿ ವ್ಯಾಪಾರಿಗಳು, ಹೊಟೇಲ್, ಭಿಕ್ಷಾಟಣೆ, ಮೀನುಗಾರಿಕೆ, ಕೃಷಿ, ಕಟ್ಟಡ ನಿರ್ಮಾಣ, ಗಣಿಗಾರಿಕೆಯಲ್ಲಿ ಜೀತ ಕಾರ್ಮಿಕರನ್ನು ಕಾಣಬಹುದಾಗಿದೆ. ದುರ್ಬಲ ವರ್ಗದವರು ಸಾಲದ ಅಥವಾ ಇತರೆ ಭಾದ್ಯತೆಗಳಾದ ಆರ್ಥಿಕ, ಪಾರಂಪಾರ್ಯ, ಸಾಮಾಜಿಕ, ಜಾತಿ, ಮುಂಗಡ ಹಣದಿಂದ ಈ ಪದ್ದತಿಗೆ ಬಲಿಯಾಗುತ್ತಿದ್ದು, ಇವರು ಕಾರ್ಮಿಕರ ಮೂಲ ಹಕ್ಕುಗಳಾದ ಉದ್ಯೋಗದ ಹಕ್ಕು, ಸ್ವಾತಂತ್ರದ ಹಕ್ಕು, ಕನಿಷ್ಠ ವೇತನದ ಹಕ್ಕು, ಚಲನೆಯ ಹಕ್ಕು, ಸ್ವಾತಂತ್ರ ಹಕ್ಕು, ಖರೀದಿಯ/ ಮಾರಾಟದ ಹಕ್ಕುಗಳಿಂದ ವಂಚಿತರಾಗಿ ದೈಹಿಕ ಮತ್ತು ಮಾನಸಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಇವರನ್ನು ಈ ಶೋಷಣೆಯಿಂದ ಮುಕ್ತಗೊಳಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜೀತ ಪದ್ದತಿ ತಡೆಗಟ್ಟುವಿಕೆ, ಜೀತ ಪದ್ದತಿ ಒಳಗಾದವರನ್ನು ಗುರುತಿಸುವುದು ಹೇಗೆ, ಅವರನ್ನು ರಕ್ಷಿಸುವುದು ಹೇಗೆ, ಅವರಿಗೆ ಪುನರ್ವಸತಿ ಕಲ್ಪಿಸುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಚುನಾವಣೆ ಶಾಖೆಯ ತಹಸೀಲ್ದಾರ ಪ್ರಮೋದ ನಾಯ್ಕ, ಕಾರ್ಮಿಕಾ ಇಲಾಖೆಯ ಅಧಿಕಾರಿಗಳಾದ ಲಲಿತಾ ಸಾತೇನಹಳ್ಳಿ, ವೀಣಾ ಮಾಸ್ತಿ, ಸಂಪನ್ಮೂಲ ವ್ಯಕ್ತಿ ಚೈತ್ರ ವೆಂಕಟೇಶ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


