ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪುರ ಅನುಭವ ಮಂಟಪ ಗುರುಕುಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ (NOHP) ಅಡಿಯಲ್ಲಿ ವಿಶೇಷ ಜಾಗೃತಿ ಮತ್ತು ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂತಪುರ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿಗಳಾದ ಡಾ. ರೇಣುಕಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಣ್ಣ ಮಕ್ಕಳಿಗೆ ಹಲ್ಲಿನ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ದಿನಕ್ಕೆ ಎಷ್ಟು ಬಾರಿ ಹಲ್ಲುಜ್ಜಬೇಕು?: ಮಕ್ಕಳು ಪ್ರತಿದಿನ ಕನಿಷ್ಠ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅತಿಯಾದ ಚಾಕ್ಲೆಟ್ ಸೇವನೆ ಮತ್ತು ಎಣ್ಣೆ ಪದಾರ್ಥಗಳ ಬಳಕೆಯಿಂದ ಹಲ್ಲುಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದ ಅವರು, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಡಾ. ರೇಣುಕಾ ಅವರು ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಉಚಿತ ಬ್ರಶ್‌ಗಳನ್ನು ವಿತರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ತಪಾಸಣೆಯ ಸಮಯದಲ್ಲಿ ಯಾವ ಮಕ್ಕಳಲ್ಲಿ ಹಲ್ಲು ಹುಳುಕಿನ ಸಮಸ್ಯೆ ಕಂಡುಬಂದಿದೆಯೋ, ಅಂತಹ ಮಕ್ಕಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಶಾಲಾ ಶಿಕ್ಷಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಸಂಗಮೇಶ್, ಶಾಲೆಯ ಪ್ರಿನ್ಸಿಪಾಲ್ ಗುರುಪ್ರೀತ ಮೇಡಂ, ವಿಜಯ್ ಕುಮಾರ್ ಪಾಟೀಲ್, ವಾಣಿಶ್ರೀ ಪಾಟೀಲ್, ಗೀತಾ, ಸರಸ್ವತಿ, ಜ್ಯೋತಿ, ಬಸವ ಪ್ರಸಾದ್ ಸ್ವಾಮಿ ಹಾಗೂ ಶಾಲೆಯ ಇತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


