ಚಿತ್ರದುರ್ಗ: ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪನವರ ಹೇಳಿಕೆಯನ್ನು ಖಂಡಿಸಿ,ಈ ಕೂಡಲೇ ಸಚಿವ ಸಂಪುಟದಿಂದ ಈಶ್ವರಪ್ಪ ನವರನ್ನು ವಜಾಗೊಳಿಸಿ, ಅವರ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸುವಂತೆ ಆಗ್ರಹಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ತಾಲ್ಲೂಕಿನ ಕಾಂಗ್ರೆಸ್ ಕಛೇರಿಯಿಂದ ಪ್ರಮುಖ ರಸ್ತೆಗಳಲ್ಲಿ, ಈಶ್ವರಪ್ಪ ಒಬ್ಬ ಹುಚ್ಚ ಎಂದು ಘೋಷಣೆಯನ್ನು ಕೂಗುತ್ತ, ಹಿರಿಯೂರು ತಹಶಿಲ್ದಾರರ ಕಛೇರಿಯವರೆಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪನವರು ಇತ್ತೀಚೆಗೆ ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆಯನ್ನು ಕೊಟ್ಟಿರುವುದು ದೇಶದ್ರೋಹದ ಹೇಳಿಕೆಯಾಗಿದೆ, ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆಯ ಸಂಕೇತವಾಗಿದೆ ಎಂದರು.
ಈಶ್ವರಪ್ಪನವರ ಹೇಳಿಕೆಯಿಂದ ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ದಿಗ್ಭ್ರಮೆಯಾಗಿದೆ. ಇದನ್ನು ವಿರೋಧಿಸಿ, ಈಶ್ವರಪ್ಪನವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ, ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಕೆ ಪಿ ಸಿ ಸಿ ಕಾರ್ಮಿಕ ವಿಭಾಗದ ಡಾ. ಸುಜಾತ, ಸೇರಿದಂತೆ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಎಲ್.ಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಆರ್.ನಾಗೇಂದ್ರ ನಾಯ್ಕ, ಜಿಲ್ಲಾ ಪಂಚಾಯತಿ ಪಾಪಣ್ಣ ಹಾಗೂ ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರುಗಳು , ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಸಹ ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ – ದಾವಣಗೆರೆ) .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB