ಶಿರಾ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (APMC) ಹುಣಸೆಹಣ್ಣಿನ ಬೆಲೆ ಏಕಾಏಕಿ ಕುಸಿತ ಕಂಡಿದ್ದು, ಬೆಳೆಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಲ್ ಗೆ ಸುಮಾರು 1,000 ರೂಪಾಯಿಗಳಷ್ಟು ದರ ಇಳಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಮಂಗಳವಾರ ಹರಾಜು ಪ್ರಕ್ರಿಯೆ ಆರಂಭವಾದಾಗ ಬೆಲೆ ಕುಸಿದಿರುವುದನ್ನು ಗಮನಿಸಿದ ರೈತರು ಅಸಮಾಧಾನ ವ್ಯಕ್ತಪಡಿಸಿದರು. ವರ್ತಕರು ಉದ್ದೇಶಪೂರ್ವಕವಾಗಿ ಬೆಲೆ ಇಳಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಟೆಂಡರ್ ಪ್ರಕ್ರಿಯೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಮಾರುಕಟ್ಟೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ರೈತರು, ವರ್ತಕರು ಮತ್ತು ಎಪಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಧಿಕಾರಿಗಳು ಮತ್ತು ವರ್ತಕರು ಬೆಲೆ ಕುಸಿತಕ್ಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಹಣ್ಣು ಆವಕವಾಗಿರುವುದು ಮತ್ತು ಹವಾಮಾನ ವೈಪರಿತ್ಯವೇ ಕಾರಣ ಎಂದು ವಿವರಿಸಿದರು.
ಕಳೆದ ವಾರ ಉತ್ತಮ ಗುಣಮಟ್ಟದ ಹುಣಸೆಹಣ್ಣು ಪ್ರತಿ ಕ್ವಿಂಟಲ್‌ಗೆ ₹8,000 ರವರೆಗೆ ಮಾರಾಟವಾಗಿತ್ತು.ಈ ವಾರ ಅದು ದಿಢೀರ್ ಆಗಿ ₹7,000 ಕ್ಕೆ ಕುಸಿದಿದೆ.
ರೈತರ ಪ್ರತಿಭಟನೆ ಮತ್ತು ಸಭೆಯ ನಂತರ ಬೆಲೆಯಲ್ಲಿ ಸಲ್ಪ ಸುಧಾರಣೆ ಕಂಡುಬಂದು, ಪ್ರತಿ ಕ್ವಿಂಟಲ್‌ಗೆ ಸುಮಾರು ₹300 ರಷ್ಟು ಏರಿಕೆಯಾಯಿತು.
ಗೋದಾಮು ಸೌಲಭ್ಯ:
ಬೆಲೆ ಕಡಿಮೆ ಇರುವುದರಿಂದ ಹಣ್ಣು ಮಾರಾಟ ಮಾಡಲು ಇಚ್ಛಿಸದ ರೈತರಿಗೆ ತಮ್ಮ ಮಾಲನ್ನು ಎಪಿಎಂಸಿ ಗೋದಾಮಿನಲ್ಲಿ ಇಟ್ಟುಕೊಳ್ಳಲು ಅಧಿಕಾರಿಗಳು ಸಲಹೆ ನೀಡಿದರು. ಬೆಲೆ ಸುಧಾರಿಸಿದ ನಂತರ ಮಾರಾಟ ಮಾಡಲು ರೈತರು ನಿರ್ಧರಿಸಿ, ತಮ್ಮ ಉತ್ಪನ್ನಗಳನ್ನು ಗೋದಾಮಿನಲ್ಲಿ ಶೇಖರಿಸಿಟ್ಟಿದ್ದಾರೆ. ತುಮಕೂರು ಮಾರುಕಟ್ಟೆಯಲ್ಲೂ ಇದೇ ರೀತಿಯ ಬೆಲೆ ಕುಸಿತ ಕಂಡುಬಂದಿದ್ದು, ಒಟ್ಟಾರೆಯಾಗಿ ಜಿಲ್ಲೆಯ ಹುಣಸೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


