ಪಾವಗಡ: ತಾಲ್ಲೂಕಿನ ಕ್ಯಾತಗಾನಕೆರೆ ಗ್ರಾಮದ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ, ಸುಮಾರು 20 ಕುರಿಗಳು ಸಾವನ್ನಪ್ಪಿರುವ ಧಾರುಣ ಘಟನೆ ಸಂಭವಿಸಿದೆ.
ಗ್ರಾಮದ ವೆಂಕಟೇಶ್ (ತಂದೆ ನಾರಾಯಣಪ್ಪ) ಅವರಿಗೆ ಸೇರಿದ ಕುರಿಗಳನ್ನು ಎಂದಿನಂತೆ ಜಮೀನಿನಲ್ಲಿ ಕಟ್ಟಿ ಹಾಕಲಾಗಿತ್ತು. ಮಧ್ಯರಾತ್ರಿ ಸುಮಾರು 3:00 ಗಂಟೆಯ ಸುಮಾರಿಗೆ ಏಕಾಏಕಿ ನುಗ್ಗಿದ ನಾಯಿಗಳ ಗುಂಪು ಕುರಿಗಳ ಮೇಲೆ ಭೀಕರ ದಾಳಿ ನಡೆಸಿವೆ. ನಾಯಿಗಳ ಅಟ್ಟಹಾಸಕ್ಕೆ ಸ್ಥಳದಲ್ಲೇ 20 ಕುರಿಗಳು ಪ್ರಾಣ ಬಿಟ್ಟಿವೆ.
ಕುಟುಂಬಕ್ಕೆ ಆರ್ಥಿಕ ಪೆಟ್ಟು:
ಕುರಿಗಾಹಿ ವೆಂಕಟೇಶ್ ಅವರು ಪಾರ್ಶ್ವವಾಯು (Paralysis) ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯ ಜವಾಬ್ದಾರಿಯನ್ನೆಲ್ಲಾ ಅವರ ಪತ್ನಿಯೇ ಹೊತ್ತುಕೊಂಡಿದ್ದರು. ಕುರಿ ಸಾಕಾಣಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ಬಡ ಕುಟುಂಬಕ್ಕೆ, ಈ ದುರ್ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡ ಕುಟುಂಬವು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಅಧಿಕಾರಿಗಳ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ವರಕೇರಪ್ಪ ಅವರ ಮಾರ್ಗದರ್ಶನದಲ್ಲಿ ಪಶು ವೈದ್ಯಾಧಿಕಾರಿ ಮೇಘನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಳಿಯಲ್ಲಿ ಗಾಯಗೊಂಡಿರುವ ಇನ್ನುಳಿದ ಕುರಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕಷ್ಟಪಟ್ಟು ಸಾಕಿದ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು. ಮಾನವೀಯ ದೃಷ್ಟಿಯಿಂದ ಸೂಕ್ತ ಆರ್ಥಿಕ ಪರಿಹಾರವನ್ನು ನೀಡಿ, ಬಡ ಕುಟುಂಬದ ನೆರವಿಗೆ ಬರಬೇಕು ಎಂದು ಸ್ಥಳೀಯರು ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


