ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮದಿಂದ ಬುಧವಾರ ಸುಮಾರು 220ಕ್ಕೂ ಮೇಲ್ಪಟ್ಟ ಗೋಪಾಲಕರಿಗೆ, ರೈತಾಪಿ ಜನರಿಗೆ ಮೇವು ವಿತರಿಸಲಾಯಿತು. ದೂರದ ಪಳವಳ್ಳಿ, ಗೋರಸಮಾವು, ವಡ್ರೇವು, ರೊಪ್ಪ, ಕಣಿವೆನಹಳ್ಳಿ ಮುಂತಾದ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೋಪಾಲಕರು ಬಂದು ಮೇವನ್ನು ಪಡೆದರು.
ಬಹುಶಃ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ ಜನರು ಬಂದು ಮೇವು ಪಡೆಯುವುದರಲ್ಲಿ ಸಂದೇಹವಿಲ್ಲ. ಕಾರಣ, ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚುತ್ತಲಿದ್ದು, ಮೇವು ದೊರೆಯುವುದು ಕಷ್ಟಕರ ಆಗಿದೆ. ಮೇವು ಆಂಧ್ರಪ್ರದೇಶಗಳಲ್ಲಿ ದೊರೆಯುವುದು ಕಡಿಮೆಯಾಗುತ್ತಿದ್ದು, ಬಹುಶಃ ಮುಂದಿನ ದಿನಗಳಲ್ಲಿ ಮಂಡ್ಯ ಅಥವಾ ದಾವಣಗೆರೆಯಿಂದ ಮೇವನ್ನು ಖರೀದಿಸಬೇಕಾಗಬಹುದು ಎಂದು ಯೋಜನೆಯ ರೂವಾರಿ ಸ್ವಾಮಿ ಜಪಾನಂದಜೀ ಮಹಾರಾಜ್ ತಿಳಿಸಿದರು. ಪ್ರತಿ ದಿನವೂ ಸುಮಾರು 8 ರಿಂದ 10 ಲೋಡು ಮೇವನ್ನು ಚಳ್ಳಕೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನೀಡಬೇಕಾಗಿದೆ. ಆದ್ದರಿಂದ ಮೇವಿನ ಕೊರತೆ ಎದುರಿಸಬೇಕಾಗಬಹುದು ಎಂದು ಪೂಜ್ಯರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾನಾ ಭಾಗಗಳಿಂದ ರೈತಾಪಿ ಮುಖಂಡರುಗಳು ಹಾಗೂ ಕಿಲಾರಿಗಳು, ಗೋಪಾಲಕರು ಮನವಿ ನೀಡುತ್ತಲೇ ಬರುತ್ತಿದ್ದಾರೆ. ನಿನ್ನೆ ಪಾವಗಡ ತಾಲ್ಲೂಕಿನ ಗಡಿ ಭಾಗದ ಅತ್ಯಂತ ಹಿಂದುಳಿದ ಪ್ರಾಂತ್ಯವಾದ ವಡ್ರೇವು ಭಾಗದಿಂದ ಸುಮಾರು 200ಕ್ಕೂ ಮಿಗಿಲಾದ ಗೋವುಗಳನ್ನು ನೋಡಿಕೊಳ್ಳುತ್ತಿರುವ ಗೋಪಾಲಕರು ತಮ್ಮ ಮನವಿ ಸಲ್ಲಿಸಿದರು.
ಹಾಗೆಯೇ ಭೂಪುರ, ನಾಗಲಾಪುರ ಪ್ರದೇಶಗಳಿಂದ ಮನವಿ ಪತ್ರಗಳು ಬರುತ್ತಿವೆ. ಹೀಗಾಗಿ ಮೇವು ವಿತರಣಾ ಕೇಂದ್ರದ ಜವಾಬ್ದಾರಿ ದಿನೆ ದಿನೆ ಹೆಚ್ಚಾಗುತ್ತಾ ಬರುತ್ತಿದೆ. ಮೇವನ್ನು ನಾನಾ ಭಾಗಗಳಿಂದ ಖರೀದಿಸಬೇಕಾಗಿ ಬರುತ್ತದೆ. ಈ ಮಹತ್ಕಾರ್ಯಕ್ಕೆ ಎಲ್ಲ ವರ್ಗದ ಜನರಿಂದ ಸಹಕಾರ ದೊರೆಯುತ್ತಿರುವುದು ಸಂತೋಷದ ವಿಚಾರ ಎಂದು ಪೂಜ್ಯ ಸ್ವಾಮೀಜಿಯವರು ತಿಳಿಸಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


