ತುಮಕೂರು: ಶಿಕ್ಷಣ, ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡುತ್ತಿರುವ ರಾಜ್ಯ ಒಕ್ಕಲಿಗರ ಸಂಘವು ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯಕ್ಕೆ ಶಕ್ತಿ ತುಂಬ ಬೇಕು. ತುಮಕೂರಿನಲ್ಲಿ ಸಂಘದಿಂದ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ಮಾಡಿದರು.
ನಗರದ ಮೇಲಕೋಟೆಯ ರಾಜ್ಯ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ 2 ಮತ್ತು 3ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿ, ಈ ಹಾಸ್ಟೆಲ್ ಪಕ್ಕದಲ್ಲಿ ಸಂಘದ ನಿವೇಶನವಿದೆ, ಸಾರ್ವಜನಿಕರ ಉಪಯೋಗಕ್ಕಾಗಿ ಆಸ್ಪತ್ರೆ ಸ್ಥಾಪನೆ ಮಾಡಬೇಕು. ಈ ಕಾರ್ಯ ಶೀಘ್ರವಾಗಿ ಆರಂಭಗೊಳ್ಳಲು ಒಕ್ಕಲಿಗರ ಸಂಘದ ಪದಾಧಿಕಾರಿಗಳು ನಿರ್ಧಾರ ಮಾಡಬೇಕು ಎಂದರು.
ಕುಣಿಗಲ್ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಸಾಂಘಿಕ ಶಕ್ತಿ ನಿಜವಾದ ಸಮುದಾಯದ ಶಕ್ತಿ. ರಾಜಕೀಯ, ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಲು ರಾಜ್ಯ ಒಕ್ಕಲಿಗರ ಸಂಘ ಆಗಿಂದಾಗ್ಗೆ ಸಮುದಾಯದ ಸಮಾವೇಶಗಳನ್ನು ಮಾಡಿ ಜಾಗೃತಿ ಮೂಡಿಸಬೇಕು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ಒಕ್ಕಲಿಗರ ಸಂಘವು ವೈದ್ಯಕೀಯ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಸಮುದ್ರವಿದ್ದಂತೆ, ಆರ್ಥಿಕವಾಗಿಯೂ ಸದೃಢವಾಗಿದೆ. ಸಂಘದಿಂದ ಸಮುದಾಯಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಬದ್ಧತೆಯಿಂದ ಮಾಡಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ಸಮುದಾಯದ ಕೆಲಸ ಕಾರ್ಯಗಳಿಗಾಗಿ ಆಸ್ತಿ ನಿರ್ಮಾಣ ಮಾಡಲು ಸಂಘ ತೀರ್ಮಾನ ಮಾಡಿದೆ. ಎಲ್ಲಾ ಜಿಲ್ಲೆಗಳಲ್ಲೂ ಆದ್ಯತೆ ಮೇಲೆ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಗುವುದು ಎಂದರು.
ಸಂಘದ ನಿರ್ದೇಶಕರು, ಭೂ ಖರೀದಿ ಸಮಿತಿ ಅಧ್ಯಕ್ಷರೂ ಆದ ಆರ್. ಹನುಮಂತರಾಯಪ್ಪ ಮಾತನಾಡಿ, ಈ ವಿದ್ಯಾರ್ಥಿ ನಿಲಯಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಣ್ಣುಮಕ್ಕಳಿಗೆ ಸ್ಥಳಾವಕಾಶವಿಲ್ಲದೆ ಸಮಸ್ಯೆಯಾಗಿದೆ. ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು. ಸಂಘದ ನಿರ್ದೇಶಕರೂ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಅಧ್ಯಕ್ಷರಾದ ಲೋಕೇಶ್ ನಾಗರಾಜಯ್ಯ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್, ಹಾಸ್ಟೆಲ್ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್, ಮನೋಹರಗೌಡ, ತುಡಾ ಮಾಜಿ ಅಧ್ಯಕ್ಷ ದೇವಗೌಡ, ವಿವಿಧ ಸಂಘಸಂಸ್ಥೆಗಳ ಮುಖಂಡರಾದ ಲಕ್ಷ್ಮಗೌಡ, ಭೈರವ ಗಿರೀಶ್, ಮಂಜುನಾಥ್, ನಟೇಶ್, ಜಯಮ್ಮ, ನಾಗಮಣಿ ಕಾಮೇಶ್, ಪುಟ್ಟಸ್ವಾಮಿ, ರಂಗಪ್ಪ, ನರಸಿಂಹಮೂರ್ತಿ, ಉಪ್ಪಾರಹಳ್ಳಿ ಕುಮಾರ್, ಪ್ರೊ.ವೀರಯ್ಯ, ಮುನಿಸ್ವಾಮಿಗೌಡ, ಲೀಲಾವತಿ, ಮಂಜುಳಾ ಮೊದಲಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


