ಗುಬ್ಬಿ: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ನಮ್ಮ ಬೆಂಬಲವಿದೆ. ಆದರೆ ಶೇ.33 ಬದಲು ಶೇ. 50 ನೀಡುವುದು ಒಳ್ಳೆಯದು. ಮಹಿಳೆಯರಿಗೆ ಅವಕಾಶ ಸಿಕ್ಕರೆ ಪ್ರಾಮಾಣಿಕ ಕೆಲಸವನ್ನು ನಿರೀಕ್ಷೆ ಮಾಡಬಹುದು ಎಂದು ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಗುಬ್ಬಿ ಪಟ್ಟಣದ ಬಿಲ್ಲೆಪಾಳ್ಯ ಗ್ರಾಮದಲ್ಲಿ 37 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿ, ಬಲದಂಡೆ ಕೋಡಿ ಚರಂಡಿ ಕಾಮಗಾರಿಗೆ 75 ಲಕ್ಷ, ಬಸವ ನಗರದ ರಸ್ತೆ ಕಾಮಗಾರಿಗೆ 1 ಕೋಟಿ, ಸುಭಾಷ್ ನಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ 69 ಲಕ್ಷ ಅನುದಾನ ಮತ್ತು ಪಟ್ಟಣದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ 9 ಕೋಟಿ ಅನುದಾನದ ಎಲ್ಲಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಒಟ್ಟಿಗೆ ಜಾರಿಗೊಳ್ಳುವ ಸಾಧ್ಯತೆ ಇದೆ. ಎಲ್ಲಾ ರಂಗದಲ್ಲಿಯೂ ಮಹಿಳೆಯರೇ ಮುಂದೆ ಇದ್ದು ನಮ್ಮ ತಾಲೂಕಿನಲ್ಲಿಯೂ ಮಹಿಳಾ ಅಧಿಕಾರಿಗಳು ಹೆಚ್ಚಾಗಿದ್ದಾರೆ. ಪ್ರಾಮಾಣಿಕ ಕೆಲಸ ಇಲ್ಲಿ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಸರಿಯಿದೆ. 2029 ರ ಸಂಸದರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜೊತೆಗೆ ಕ್ಷೇತ್ರ ವಿಂಗಡಣೆ ಒಟ್ಟಿಗೆ ಆಗಬೇಕಿದೆ ಎಂದರು.
ಹೈಕಮಾಂಡ್ ಭೇಟಿ ಕೇವಲ ಮಂತ್ರಿ ಸ್ಥಾನದ ಲಾಬಿ ಅಲ್ಲದೆ ಸಿಎಂ ಕುರ್ಚಿ ಬದಲಾವಣೆಗಾಗಿ ನಡೆಯುತ್ತಿರುವ ಒಂದು ಒಳಜಗಳ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲವೇ? ಎಷ್ಟು ಮಂದಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ? ಸಹಜವಾಗಿ ನಡೆಯುವ ಪ್ರಕ್ರಿಯೆ ಇದಾಗಿದ್ದು ಹೈಕಮಾಂಡ್ ಭೇಟಿಗೆ ಕೆಲವು ಶಾಸಕರು ಮುಂದಾಗಿ ಅವರವರ ಬೇಡಿಕೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ಅದಕ್ಕೆ ಏನೇನೋ ಕಥೆ ಕಟ್ಟೋದು ಸರಿಯಲ್ಲ ಎಂದು ಕುಟುಕಿದರು.
ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ದೇವೇಗೌಡರ ಕುಟುಂಬದ ಎಲ್ಲರೂ ರಾಜಕಾರಣಿಗಳೇ. ಯಡಿಯೂರಪ್ಪ ಅವರ ಮನೆಯಲ್ಲೂ ಸಹ ಇದೆ. ಬಿಜೆಪಿ ಜೆಡಿಎಸ್ ಸೇರಿ ಎಲ್ಲಾ ಪಕ್ಷದಲ್ಲಿ ಕುಟುಂಬ ರಾಜಕಾರಣ ಇದೆಯಲ್ಲ? ಆತ್ಮಾ ಸಾಕ್ಷಿ, ಮಾನ ಮರ್ಯಾದೆ ಇರುವವರು ಕುಟುಂಬ ರಾಜಕಾರಣ ಎಂಬ ಮಾತು ಆಡುವಂತಿಲ್ಲ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಬಿಲ್ಲೆಪಾಳ್ಯ ನರಸಿಂಹಮೂರ್ತಿ, ಮಹಮದ್ ಸಾದಿಕ್, ಸಿ. ಮೋಹನ್, ಅಣ್ಣಪ್ಪಸ್ವಾಮಿ, ಪಿ.ಟಿ. ಸತೀಶ್, ಉಂಡೆ ರಾಮಣ್ಣ, ಲೋಕೇಶ್ ಬಾಬು ಸೇರಿದಂತೆ ಸಾರಿಗೆ ನಿಗಮದ ಅಧಿಕಾರಿಗಳು ಇನ್ನಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


