ಬೆಂಗಳೂರು: ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಸಂಕನಗೌಡ ಅವರು ಸುಮಾರು 8 ವರ್ಷಗಳ ಸುದೀರ್ಘ ನಾಪತ್ತೆಯ ನಂತರ ದಿಢೀರ್ ಎಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಾವು ನಾಪತ್ತೆಯಾಗಲು ಕಾರಣವೇನು ಮತ್ತು ಇಷ್ಟು ವರ್ಷ ಎಲ್ಲಿದ್ದರು ಎಂಬ ಎಳೆಎಳೆಯಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸಿನಿಮಾ ನಿರ್ಮಾಣ, ಹೋಟೆಲ್ ಉದ್ಯಮ ಮತ್ತು ಮೈನಿಂಗ್ ನಲ್ಲಿ ಹೂಡಿಕೆ ಮಾಡಿದ್ದ ಹಣವೆಲ್ಲ ನಷ್ಟವಾಗಿತ್ತು. ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದ ಮಲ್ಲಿಕಾರ್ಜುನ್, ಸಾಲಗಾರರ ಕಾಟಕ್ಕೆ ಹೆದರಿ 2018ರ ಜುಲೈನಲ್ಲಿ ಬೆಂಗಳೂರು ಬಿಟ್ಟಿದ್ದರು. ಸಾಲದ ಹೊರೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದರು. ಆದರೆ ನಂತರ ಹೆಂಡತಿ-ಮಕ್ಕಳಿಗೆ ಪತ್ರ ಬರೆದಿಟ್ಟು ಊರು ಬಿಟ್ಟ ಅವರು, ಕೆಲ ಕಾಲ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದರು ಅಂತಾ ತಿಳಿಸಿದರು.
ದರ್ಶನ್ ಮತ್ತು ದಿನಕರ್ ತೂಗುದೀಪ ಅವರು ತನ್ನನ್ನು ಸ್ವಂತ ಅಣ್ಣನಂತೆ ನೋಡಿಕೊಂಡಿದ್ದರು ಎಂದು ಮಲ್ಲಿಕಾರ್ಜುನ್ ಸ್ಮರಿಸಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆಯೇ ಮರಳಿ ಬಂದಿದ್ದ ಅವರು, ಅರ್ಜುನ್ ಸರ್ಜಾ ಅವರೊಂದಿಗಿನ ಚೆಕ್ ಬೌನ್ಸ್ ಕೇಸ್ ಗೆ ಸಂಬಂಧಿಸಿದಂತೆ ಜಾಮೀನು ಪಡೆದಿದ್ದಾರೆ. ಈ ನಡುವೆ ಪಾರ್ಶ್ವವಾಯು (Stroke) ಕೂಡ ಸಂಭವಿಸಿತ್ತು ಎಂದು ಅವರು ತಿಳಿಸಿದ್ದಾರೆ.
“ನಾನು ಸೋತಿದ್ದೇನೆ ಆದರೆ ಸತ್ತಿಲ್ಲ, ಈಗ ಎರಡನೇ ಇನ್ನಿಂಗ್ಸ್ ಆರಂಭಿಸಲು ಬಂದಿದ್ದೇನೆ. ಎಲ್ಲರ ಸಾಲವನ್ನೂ ತೀರಿಸುವ ಉದ್ದೇಶವಿದೆ, ದಯವಿಟ್ಟು ನನಗೆ ಸ್ವಲ್ಪ ಕಾಲಾವಕಾಶ ಕೊಡಿ” ಎಂದು ಮಲ್ಲಿಕಾರ್ಜುನ್ ಭಾವುಕರಾಗಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


