ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಎಲೆಕಡಕಲು ಗ್ರಾಮದ ಉದ್ಯಮಿ ವೈ.ಎಚ್.ಗೋಪಿ ಅವರು ₹1.50 ಕೋಟಿ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ತಮ್ಮ ತಂದೆ ವೈ.ಕೆ. ಹೊನ್ನಯ್ಯ ಮತ್ತು ತಾಯಿ ಜಯಮ್ಮ ಅವರ ಸ್ಮರಣಾರ್ಥವಾಗಿ ಹಾಗೂ ತಮ್ಮ ಮಗಳ ಹೆಸರಿನಲ್ಲಿ ಸ್ಥಾಪಿಸಲಾದ ‘ಯಶಿಕಾ ಫೌಂಡೇಶನ್’ ವತಿಯಿಂದ ಈ ಬೃಹತ್ ದೇಣಿಗೆಯನ್ನು ನೀಡಲಾಗುತ್ತಿದೆ. ಈ ಹಣದಲ್ಲಿ ಶಾಲೆಯ ಆವರಣದಲ್ಲಿ 10 ಸುಸಜ್ಜಿತ ಕೊಠಡಿಗಳು, ಅತ್ಯಾಧುನಿಕ ಶೌಚಾಲಯ ಹಾಗೂ ಅವಶ್ಯಕ ಪೀಠೋಪಕರಣಗಳನ್ನು ನಿರ್ಮಿಸಿಕೊಡಲಾಗುವುದು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ರಂಗನಾಥ್ ಅವರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಉಜ್ಜನಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿಗಳು ಸಂಪೂರ್ಣವಾಗಿ ಹದಗೆಟ್ಟಿದ್ದವು. ಇದನ್ನು ಗಮನಿಸಿದ ಬೆಂಗಳೂರು ನಿವಾಸಿ ಗೋಪಿ ಅವರು ಶಾಲೆಯ ಪುನರ್ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ವೈ.ಎಚ್. ಗೋಪಿ ಅವರು ಈ ಹಿಂದೆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ನೀರಿನ ಬಾಟಲಿ ವಿತರಣೆ ಮತ್ತು ಶಾಲೆಗೆ ಪ್ರೊಜೆಕ್ಟರ್ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಬೆಂಬಲ ನೀಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಂಗನಾಥ್ ಅವರು, “ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮೂಲಸೌಕರ್ಯಗಳು ಅತ್ಯಗತ್ಯ. ದಾನಿಗಳ ಇಂತಹ ಕಾರ್ಯ ಶ್ಲಾಘನೀಯ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾನಿ ವೈ.ಎಚ್. ಗೋಪಿ, ರಾಜೇಶ್, ವೆಂಕಟರಾಮು, ಕುಮಾರ್ ಮತ್ತು ಜಯರಾಮಣ್ಣ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


