ಹುಳಿಯಾರು: ತಾಲ್ಲೂಕಿನ ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮಕ್ಕೆ ಸಮರ್ಪಕವಾಗಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮದ ಮಹಿಳೆಯರು ಶುಕ್ರವಾರ ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ಮಾರುತಿ, ಆಂಜನೇಯ ಹಾಗೂ ವಿಘ್ನೇಶ್ವರ ಸ್ವಸಹಾಯ ಮಹಿಳಾ ಸಂಘಗಳ ಸದಸ್ಯರಾದ ಚಂದ್ರಮ್ಮ, ಪಾರ್ವತಮ್ಮ, ವಿಜಯಮ್ಮ, ಗಂಗಮ್ಮ ಮತ್ತು ವಿಮಲಾಕ್ಷಿ ಅವರು ಸಾಮಾಜಿಕ ಹೋರಾಟಗಾರರಾದ ಶ್ರೀನಿವಾಸ್ ಮತ್ತು ಲೋಕೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ಸಿಂಗಾಪುರ ಗ್ರಾಮವು ಜಿಲ್ಲೆಯ ಗಡಿಭಾಗದಲ್ಲಿದ್ದು, ಇಲ್ಲಿಗೆ ಸರಿಯಾದ ಸಾರಿಗೆ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದೆ. ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ದಿನನಿತ್ಯ ಪಟ್ಟಣಕ್ಕೆ ಹೋಗುವ ಕೂಲಿ ಕಾರ್ಮಿಕರು ಹಾಗೂ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವ ರೋಗಿಗಳು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರಿಗೆ ಸೌಲಭ್ಯವಿಲ್ಲದ ಕಾರಣ ಮಹಿಳೆಯರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಈ ಭಾಗಕ್ಕೆ ಹೆಚ್ಚುವರಿ ಬಸ್ ಗಳನ್ನು ಓಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಹಿಳೆಯರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


