ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ಜೆಡಿಎಸ್ ಸೇರುತ್ತಾರೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ವದಂತಿಗಳಿಗೆ ಸ್ವತಃ ಜಮೀರ್ ಅಹ್ಮದ್ ಅವರೇ ತೆರೆ ಎಳೆದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಜೆಡಿಎಸ್‌ಗೆ ಹೋಗುತ್ತೇನೆ ಎನ್ನುವುದು ಕೇವಲ ಊಹಾಪೋಹ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಅಂದಮೇಲೆ ನಾನು ಯಾಕೆ ಜೆಡಿಎಸ್‌ಗೆ ಹೋಗಲಿ?” ಎಂದು ಪ್ರಶ್ನಿಸಿದರು.
“2017ರಲ್ಲಿ ನಾನು ಕಾಂಗ್ರೆಸ್ ಸೇರಿದೆ. 2018ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಕೇಳದಿದ್ದರೂ ನನಗೆ ಸಚಿವ ಸ್ಥಾನ ನೀಡಿ 5 ಪ್ರಮುಖ ಖಾತೆಗಳನ್ನು ನೀಡಲಾಗಿತ್ತು. ಈಗಲೂ ಸಹ 4 ಖಾತೆಗಳನ್ನು ನೀಡಿದ್ದಾರೆ. ಜೆಡಿಎಸ್ ನಲ್ಲಿ ಇದ್ದಾಗ ಕುಮಾರಸ್ವಾಮಿ ಅವರು ಕೇವಲ ವಕ್ಫ್ ಖಾತೆ ಮಾತ್ರ ಕೊಟ್ಟಿದ್ದರು. ಪಕ್ಷ ನನಗೇನು ಕಡಿಮೆ ಮಾಡಿಲ್ಲ,” ಎಂದು ಅವರು ತಿಳಿಸಿದರು.
ಕುಮಾರಸ್ವಾಮಿ ಅವರೊಂದಿಗೆ ರಹಸ್ಯವಾಗಿ ಮಾತನಾಡಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, “ಅದೆಲ್ಲ ಸುಳ್ಳು ಸುದ್ದಿ. ನಾನು ಯಾಕೆ ರಹಸ್ಯವಾಗಿ ಮಾತಾಡಲಿ? ನನ್ನ ಮೇಲೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಆರೋಪ ಮಾಡುವುದು ಸರಿಯಲ್ಲ,” ಎಂದರು.
ಮಾಜಿ ಸಚಿವ ರಾಜಣ್ಣ ಅವರ ‘ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್, “ಸಿದ್ದರಾಮಯ್ಯ ಅವರು ಈಗಲೂ ಟಗರು ಇದ್ದಂತೆ. ಅವರು ಸುಮ್ಮನೆ ಮಾತನಾಡಲ್ಲ, ಅಗತ್ಯ ಬಂದಾಗ ಮಾತನಾಡುತ್ತಾರೆ. ಅವರು ಮಾತನಾಡಿದರೆ ಅದರ ಸೌಂಡ್ ಬೇರೆಯೇ ಇರುತ್ತದೆ,” ಎಂದು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


