ಮಧುಗಿರಿ : ಯಾವುದೇ ಸಹಕಾರಿ ಬ್ಯಾಂಕುಗಳಾಗಲಿ ಆರ್ಥಿಕ ಶಿಸ್ತು, ಸಾಲ ವಸೂಲಾತಿ, ಬಡವರ ಹಾಗೂ ರೈತರ ಬಗ್ಗೆ ಅಂತಃಕರಣ ಹೊಂದಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯೇ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಮಾಜಿ ಸಹಕಾರ ಸಚಿವರು, ಶಾಸಕರೂ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಿಮ್ಮ ಈ ಕನಕಪತ್ತಿನ ಸಹಕಾರ ಸಂಘವು ಶೇ. 96 ರಷ್ಟು ಮರುಪಾವತಿಯ ದಾಖಲೆ ತೋರಿಸಿದ್ದು ಉತ್ತಮವಾಗಿದೆ. ಹಾಗೂ ಆರ್ಥಿಕ ಶಿಸ್ತನ್ನು ಇದೇ ರೀತಿ ಮುಂದುವರೆಸಿ. ನನ್ನ ಎಲ್ಲ ರೀತಿಯ ಸಹಕಾರ ಸದಾ ಇರಲಿದೆ. ಸಾಲ ಪಡೆಯುವುದು ಸದಸ್ಯರ ಹಕ್ಕು. ಹಾಗೆಯೇ ಸಾಲ ತೀರಿಸುವುದು ಅವರ ಜವಾಬ್ದಾರಿ ಆಗಬೇಕು. ಸಹಕಾರಿ ಸಂಘದಲ್ಲಿ ಠೇವಣಿ ಜೊತೆಗೆ ಆಸ್ತಿಯನ್ನು ಮಾಡಲು ಮುಂದಾಗಬೇಕು. ಅದು ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರಲಿದೆ. 1 ಸಾವಿರದಿಂದ 13696 ಸದಸ್ಯರು ಷೇರು ಹಾಕಿರುವ ಸಂಘವಾಗಿದ್ದು ಶುಭವಾಗಲಿ ಎಂದರು.
ರಾಜಕೀಯದಲ್ಲಿ ಜನಬೆಂಬಲ ಸಿಗಲು ಜಾತಿ ಹಾಗೂ ಹಣ ಮುಖ್ಯವಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ನಾನು ಕೇವಲ ಸಹಕಾರಿಯಾಗಿ ಈ ಮಟ್ಟಕ್ಕೆ ಬೆಳೆಯಲು ಜಿಲ್ಲೆಯ ಸಹಕಾರಿ ಕ್ಷೇತ್ರ ಕಾರಣ. ನನ್ನಲ್ಲಿ ಹಣ ಹಾಗೂ ಜಾತಿ ಎರಡೂ ಇಲ್ಲ. ಸಹಕಾರಿಯಾಗಿ ಪಡೆದ ಅಧಿಕಾರವನ್ನು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಬಡವರ ಅಭಿವೃದ್ದಿಗೆ ಮೀಸಲಿಟ್ಟರೆ ಮಾತ್ರ ಅವನು ನಿಜವಾದ ಸಹಕಾರಿ ಆಗಬಲ್ಲ. 2004 ರಲ್ಲೇ ಬಡವರಿಗೆ, ಅಹಿಂದ ವರ್ಗದವರಿಗೆ ಬ್ಯಾಂಕಲ್ಲಿ ಸಾಲ ಸಿಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಕುರಿಗಾಹಿಗಳಿಗೆ ಕಡಿಮೆ ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಿದ್ದು ನನಗೆ ಬಹಳ ತೃಪ್ತಿ ತಂದಿತ್ತು. ಆಶ್ಚರ್ಯವೆಂದರೆ ಈ ಸಾಲವು ಶೇ.100 ರಷ್ಟು ವಸೂಲಾತಿ ಆಗಿದ್ದು ಬಡವರು ಎಂದಿಗೂ ಮೋಸ ಮಾಡಲ್ಲ ಎಂಬುದು ಅರಿವಾಯಿತು ಎಂದರು.
ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ :
ನನ್ನ ಜೀವನದಲ್ಲಿ ಸಹಕಾರಿ ಎಂದು ಕರೆಸಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಕ್ಷೇತ್ರದಿಂದಲೇ ನನಗೆ ಎಲ್ಲವೂ ಸಿಕ್ಕಿದ್ದು ಈ ಕ್ಷೇತ್ರದಲ್ಲಿ ಮೀಸಲಾತಿ ತರುವ ಉದ್ದೇಶದಿಂದಲೇ ಸಚಿವನಾದೆ. ಅದರಂತೆ ಮೀಸಲಾತಿ ಕೂಡ ಜಾರಿಗೊಳಿಸಲು ಸಿದ್ಧವಾಗಿದ್ದು ಸಿಎಂ ಸಿದ್ದರಾಮಯ್ಯನವರೇ ಆ ಕೆಲಸ ಮಾಡಲಿದ್ದಾರೆ. ಅಗ ನನಗೂ ತೃಪ್ತಿ ಸಿಗಲಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ.ಮಂಜಣ್ಣ ಮಾತನಾಡಿ, ಉತ್ತಮ ಸಹಕಾರಿಯಾಗಲು ಪಕ್ಷಭೇದ ಹಾಗೂ ಜಾತಿಭೇದ ಮಾಡಬಾರದು. ಅದರಂತೆ ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಕೆಲಸ ಮಾಡಿದ್ದಾರೆ. ಹಿಂದೆ ಅಹಿಂದ ವರ್ಗಕ್ಕೆ ಸಾಲ ಸಿಗದ ಕಾಲವಿತ್ತು. ಈಗ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿಯನ್ನೇ ರಾಜಣ್ಣ ತಂದಿದ್ದು ಅವರಿಗೆ ಸಹಕಾರಿಗಳು ಸದಾ ಋಣಿಯಾಗಿರಬೇಕು. ಕನಕ ಪತ್ತಿನ ಸಂಘ ಹಾಲುಮತಸ್ಥರಾದ ಮಾಜಿ ಶಾಸಕ ದಾಸಪ್ಪನವರಿಂದ ಆರಂಭವಾಗಿದ್ದು ನಂಬಿಕೆಗೆ ನಾವು ಅರ್ಹರು. ಹಾಗೆಯೇ ನಾವು ಕೂಡ ರಾಜಣ್ಣನವರಂತೆ ಸಹಕಾರಿ ಮನೋಭಾವ ಬೆಳೆಸಿಕೊಂಡು ನೊಂದವರ ಬದುಕಲ್ಲಿ ದೀಪ ಹಚ್ಚುವ ಕೆಲಸ ಮಾಡೋಣ ಎಂದರು.
ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ ಕನಕ ಪತ್ತಿನ ಸಹಕಾರ ಸಂಘವು 25ನೇ ವಸಂತಕ್ಕೆ ಕಾಲಿಟ್ಟಿದ್ದು 8 ಶಾಖೆಗಳನ್ನು ಹೊಂದಿದೆ. ಇದಕ್ಕೆ ಜನರ ನಂಬಿಕೆ ಕಾರಣವಾಗಿದ್ದು ಮಧುಗಿರಿಯಲ್ಲೂ ಯಶಸ್ವಿಯಾಗಲಿ ಎಂದರು.
1904 ರಲ್ಲೇ ಗಡುಗಿನಾಳದಲ್ಲಿ ಸಿದ್ದರಾಮನಗೌಡ, ಎಸ್.ಎಸ್.ಪಾಟೀಲ್, ಸಣ್ಣರಾಮನಗೌಡ ಸಹೋದರರು ಮೊದಲು ಇಂತಹ ಪತ್ತಿನ ಸಹಕಾರ ಸಂಘದ ಜನಕರಾಗಿದ್ದು 2 ರೂ. ಗಳಿಂದ ಸಾಲ ಸೌಲಭ್ಯ ಕೊಡಲು ಮುಂದಾಗಿ ಇಂದು ಇಡೀ ದೇಶದಲ್ಲಿ ಪ್ರಾಥಮಿಕ ಸಹಕಾರ ಸಂಘವು ನಡೆಯುತ್ತಿದೆ.
— ಕೆ.ಎನ್.ರಾಜಣ್ಣ, ಶಾಸಕರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಡೇ ಮನೆ ರವಿಕುಮಾರ್, ಸಿಇಓ ಲಕ್ಷ್ಮಣ್, ನಿರ್ದೇಶಕರು ಹಾಗೂ ಮುಖಂಡರಾದ ಲಕ್ಷ್ಮೀಪತಿ, ಎಸ್.ನಾಗಣ್ಣ, ಡಾ.ಎಂ.ಜಿ. ಶ್ರೀನಿವಾಸಮೂರ್ತಿ, ಮರಿಯಣ್ಣ, ಗೇಟ್ ಶಿವಣ್ಣ, ಕಮ್ಮನಕೋಟೆ ಶಿವಣ್ಣ, ಮಹಾಲಿಂಗೇಶ್, ಲಕ್ಷ್ಮೀ. ನರಸಿಂಹಯ್ಯ, ಮಂಜುನಾಥ್ ಹಾಗೂ ಇತರರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


