ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಪ್ರವಾಸಿಗರಿದ್ದ ಟಿಟಿ (Tempo Traveller) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ ಅದೃಷ್ಟವಶಾತ್ ವಾಹನದಲ್ಲಿದ್ದ ಎಲ್ಲಾ 13 ಪ್ರವಾಸಿಗರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಬೆಂಗಳೂರಿನಿಂದ 13 ಜನರ ತಂಡವೊಂದು ಟಿಟಿ ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿತ್ತು. ಸೋಮವಾರ ಸಂಜೆ ಪ್ರವಾಸ ಮುಗಿಸಿಕೊಂಡು ರಸ್ತೆಯ ಇಳಿಜಾರಿನಲ್ಲಿ ವಾಪಸ್ ಹೋಗುತ್ತಿದ್ದಾಗ, ಹಿಂದೆ ಕುಳಿತಿದ್ದ ಪ್ರಯಾಣಿಕರೊಬ್ಬರ ಪಾದರಕ್ಷೆ (ಚಪ್ಪಲಿ) ಜಾರಿ ಚಾಲಕನ ಕಾಲಿನ ಬಳಿ ಬಂದು ಬಿದ್ದಿದೆ.
ಪಾದರಕ್ಷೆಯು ಎಕ್ಸಲೇಟರ್ ಹಾಗೂ ಬ್ರೇಕ್ ಮಧ್ಯೆ ಸಿಲುಕಿಕೊಳ್ಳಬಹುದು ಎಂಬ ಆತಂಕದಿಂದ ಚಾಲಕ ಅದನ್ನು ಕೈಯಿಂದ ತೆಗೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಗಾಡಿ ನ್ಯೂಟ್ರಲ್ ಗೇರಿಗೆ ಬಿದ್ದಿದ್ದರಿಂದ, ತೀವ್ರ ಇಳಿಜಾರಿನ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಕ್ಕದಲ್ಲಿದ್ದ ಕಂದಕಕ್ಕೆ ಉರುಳಿ ಬಿದ್ದಿದೆ.
ಟಿಟಿ ವಾಹನ ಕಂದಕಕ್ಕೆ ಬೀಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸ್ಥಳೀಯ ‘ಪ್ರವಾಸಿ ಮಿತ್ರ’ರ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಟಿಟಿಯಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರಗೆ ತಂದು ರಕ್ಷಿಸಿದ್ದಾರೆ. ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಸಣ್ಣ-ಪುಟ್ಟ ಜಖಂಗೊಂಡಿದೆಯಾದರೂ, ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕ್ರೇನ್ ಮೂಲಕ ಕಂದಕಕ್ಕೆ ಬಿದ್ದಿದ್ದ ಟಿಟಿ ವಾಹನವನ್ನು ಮೇಲಕ್ಕೆ ಎತ್ತಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


