ಪಾವಗಡ: ತಾಲೂಕಿನ ಹಿರಿಯ ರಾಜಕೀಯ ಮುತ್ಸದಿ, ನಾಲ್ಕು ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವರಾಗಿ ಪಾವಗಡ ತಾಲೂಕಿನ ಜನರ ಸೇವೆ ಮಾಡಿದ್ದ ವೆಂಕಟರಮಣಪ್ಪ (80) ಅವರು ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಪಾವಗಡ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ವೆಂಕಟರಮಣಪ್ಪ ಅವರು ಮುಂಚೂಣಿಯಲ್ಲಿದ್ದರು. ಸದಾ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರು ತಾಲೂಕಿನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು.
ಪ್ರಮುಖ ರಾಜಕೀಯ ಹಾದಿ:
- 2008ರ ಸರ್ಕಾರ: ಸಣ್ಣ ಕೈಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಚಿವರಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
- 2018ರ ಸಮ್ಮಿಶ್ರ ಸರ್ಕಾರ: ಕಾರ್ಮಿಕ ಇಲಾಖೆಯ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದರು.
- ಶಾಸಕರಾಗಿ ಸೇವೆ: ಪಾವಗಡ ಕ್ಷೇತ್ರದಿಂದ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಪ್ರಗತಿಗೆ ಧ್ವನಿಯಾಗಿದ್ದರು.
ಮೃತ ವೆಂಕಟರಮಣಪ್ಪ ಅವರಿಗೆ ಮೂರು ಜನ ಮಕ್ಕಳಿದ್ದು, ಇವರ ಕಿರಿಯ ಪುತ್ರರಾದ ಎಚ್. ವಿ. ವೆಂಕಟೇಶ್ ಅವರು ಸದ್ಯ ಪಾವಗಡ ತಾಲೂಕಿನ ಶಾಸಕರಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ತಂದೆಯ ರಾಜಕೀಯ ಪರಂಪರೆಯನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಹಿರಿಯ ನಾಯಕ ವೆಂಕಟರಮಣಪ್ಪ ಅವರ ನಿಧನಕ್ಕೆ ತುಮಕೂರು ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


