ವಿಜಯನಗರ (ಕೂಡ್ಲಿಗಿ): “ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿಯು ಒಂದು ದೊಡ್ಡ ಪಿಡುಗಾಗಿದ್ದು, ಇದರ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಕೈಜೋಡಿಸಬೇಕು. ಪ್ರತಿಯೊಬ್ಬರೂ ಕಾನೂನಿನ ಅರಿವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ” ಎಂದು ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಜೆ. ಶಿಲ್ಪ ಅವರು ಕರೆ ನೀಡಿದರು.
ಪಟ್ಟಣದ ಹಿರೇಮಠ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಜೂನ್ 12ರಂದು ಆಯೋಜಿಸಲಾಗಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜವಾಬ್ದಾರಿಯುತ ನಾಗರಿಕರಾಗಲು ಕರೆ:
ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗದೆ, ಸಾಮಾಜಿಕ ಕಾಳಜಿ ಮತ್ತು ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ನಿವಾರಣೆಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಹಕರಿಸಬೇಕು. ಯುವ ಪೀಳಿಗೆಯು ತಮ್ಮ ಮೂಲಭೂತ ಕರ್ತವ್ಯಗಳು ಮತ್ತು ನೈತಿಕ ಜವಾಬ್ದಾರಿಗಳನ್ನು ಅರಿತು, ದೇಶಪ್ರೇಮ ಹಾಗೂ ನಾಡಿನ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರಾದ ಹೆಚ್.ಜೆ. ಶಿಲ್ಪರವರು ಬಾಲಕಾರ್ಮಿಕ ಪದ್ಧತಿಯನ್ನು ಖಂಡಿಸುವ ಮತ್ತು ಅದನ್ನು ತಡೆಗಟ್ಟುವ ಕುರಿತು ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಂ. ಶೈಲಜಾ ಅವರು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವ ಹಾಗೂ ಅದರ ಹಿಂದಿನ ಕರಾಳತೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ವೈ. ಶಿಲ್ಪ, ತಹಶೀಲ್ದಾರ್ ಹಿ.ಕೆ. ನೇತ್ರಾವತಿ, ತಾಲೂಕು ಪಂಚಾಯ್ತಿ ವ್ಯವಸ್ಥಾಪಕರಾದ ವಿಜಯಕುಮಾರ್, ವಕೀಲರ ಸಂಘದ ಅಧ್ಯಕ್ಷರಾದ ಜಿ. ಹೊನ್ನೂರಪ್ಪ, ಹಾಗೂ ವಕೀಲರು ಮತ್ತು ಹೋರಾಟಗಾರರಾದ ಸಿ. ವಿರುಪಾಕ್ಷಪ್ಪ ಅವರು ಪ್ರಸ್ತುತ ಸನ್ನಿವೇಶದಲ್ಲಿ ಬಾಲಕಾರ್ಮಿಕ ಪದ್ಧತಿ ತಡೆಗೆ ಇರುವ ಕಾನೂನುಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಸ್. ವೀರೇಶ್ ವಹಿಸಿದ್ದರು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಬಸವರಾಜ, ವಕೀಲರಾದ ಡಿ.ಹೆಚ್. ದುರುಗೇಶ, ಟಿ. ಮಲ್ಲಿಕಾರ್ಜುನ, ಸಿಡಿಪಿಒ ಬಿ. ಮಾಲುಂಬಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಸತೀಶ ಉಪಸ್ಥಿತರಿದ್ದರು.
ಶಿಕ್ಷಕರಾದ ಎಂ. ಹರೀಶ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಸಂಗೀತ ಶಿಕ್ಷಕಿ ಯು. ಉಮಾ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಟಿ. ಪ್ರಿಯದರ್ಶಿನಿ ಸ್ವಾಗತ ಕೋರಿ, ಶಿಕ್ಷಕಿ ಜಿ.ಎಂ. ಶ್ವೇತಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರೇಮಠ ವಿದ್ಯಾಪೀಠದ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಭಾಗವಹಿಸಿದ್ದರು.
ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


