ತಿಪಟೂರು: ಚುನಾವಣಾ ಆಯೋಗ ಹಮ್ಮಿಕೊಂಡಿರುವ ‘ಎಸ್ ಐಆರ್’ (SIR) ಪ್ರಕ್ರಿಯೆಯಿಂದಾಗಿ ಕ್ಷೇತ್ರದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು. ಈ ಪ್ರಕ್ರಿಯೆಗೆ ಒಳಗಾಗುವ ಜನಸಾಮಾನ್ಯರಿಗೆ ಯಾವುದೇ ಅನಾನುಕೂಲ ಆಗದಂತೆ ಅಗತ್ಯ ದಾಖಲಾತಿಗಳ ಲಭ್ಯತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ (ಟೂಡಾ) ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಜನಸ್ಪಂದನ ಟ್ರಸ್ಟ್ ಹಾಗೂ ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಎಸ್ಐಆರ್’ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಕ್ಷರವಂಚಿತರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಈ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮುಖ್ಯವಾಗಿ, ಸಾಮಾನ್ಯ ಮತದಾರರ ಮತ ಚಲಾಯಿಸುವ ಅಧಿಕಾರ ಮತ್ತು ಹಕ್ಕನ್ನು ಸಂರಕ್ಷಿಸುವುದೇ ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದು ಶಶಿಧರ್ ಹೇಳಿದರು.
ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚುವ ಕೆಲಸಕ್ಕಾಗಿ ಎಸ್ ಐಆರ್ ಪ್ರಕ್ರಿಯೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವು ಇದುವರೆಗೂ ಈ ಪ್ರಕ್ರಿಯೆ ಪೂರ್ಣಗೊಳಿಸಿರುವ ರಾಜ್ಯಗಳಲ್ಲಿ ಎಷ್ಟು ಮಂದಿ ಅಕ್ರಮ ವಲಸಿಗರನ್ನು ಗುರುತಿಸಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಗಡಿ ರಾಜ್ಯಗಳನ್ನು ಹೊರತುಪಡಿಸಿ, ದೇಶದ ಉದ್ದಗಲಕ್ಕೂ ಈ ವ್ಯವಸ್ಥೆಯನ್ನು ಜಾರಿ ಮಾಡಿರುವುದು ಎಷ್ಟು ಪ್ರಯೋಜನಕಾರಿ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ‘ಜಾಗೃತ ಕರ್ನಾಟಕ’ದ ಆದಂ ಖಾನ್ ಅವರು, ಎಸ್ ಐಆರ್ ಪ್ರಕ್ರಿಯೆಯಲ್ಲಿ ಮತದಾರರು ವಹಿಸಬೇಕಾದ ಮುನ್ನೆಚ್ಚರಿಕೆಗಳು ಮತ್ತು ಪಾಲಿಸಬೇಕಾದ ಕ್ರಮಗಳನ್ನು ಪಿಪಿಟಿ (PPT) ಪ್ರಸೆಂಟೇಷನ್ ಮೂಲಕ ಸ್ವಯಂಸೇವಕರಿಗೆ ಹಂತ-ಹಂತವಾಗಿ ವಿವರಿಸಿದರು. ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿದ್ದ ನೂರಾರು ನಾಗರಿಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜನಸ್ಪಂದನ ಟ್ರಸ್ಟ್ ಹಾಗೂ ಇತರ ಜನಪರ ಸಂಘಟನೆಗಳ ಮುಖಂಡರಾದ ಶ್ರೀಕಾಂತ್ ಕೆಳಹಟ್ಟಿ, ತಾಸೀನ್ ಮೈಸೂರಿ, ಅಲ್ಲಾಬಕಾಶ್, ಸೈಯದ್ ಸಾದತ್, ಇಂದ್ರಮ್ಮ, ರಾಮಕೃಷ್ಣಪ್ಪ, ರಾಜಮ್ಮ, ನವೀನ್ ಸಾರ್ಥವಳ್ಳಿ, ಸಮೀ ಉಲ್ಲಾ, ಮಾಜಿ ಗ್ರಾಪಂ ಅಧ್ಯಕ್ಷ ಉಮಾಮಹೇಶ್, ಶಫಿ ಉಲ್ಲಾ ಶರೀಫ್ ಸೇರಿದಂತೆ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


