ತಿಪಟೂರು: ಹೇಮಾವತಿ ಲಿಂಕ್ ಕೆನಾಲ್ (ಸಂಪರ್ಕನಾಲೆ) ಯೋಜನೆಯಿಂದ ತುಮಕೂರು ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಜಿಲ್ಲೆಯ ರೈತರ ಪಾಲಿಗೆ ಕರಾಳ ಶಾಸನವಾಗಲಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
“ಜಿ.ಎಸ್. ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಬಳಿಕ ಹೇಮಾವತಿ ಸಂಪರ್ಕನಾಲೆ ವಿಚಾರದಲ್ಲಿ ತಮ್ಮ ವರಸೆಯನ್ನೇ ಬದಲಾಯಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು, ಜಿಲ್ಲೆಯ ಹಿತಾಸಕ್ತಿಯನ್ನು ಬಲಿಗೊಟ್ಟು ಕೆನಾಲ್ ಕೆಲಸ ಪ್ರಾರಂಭಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಜಿಲ್ಲೆಯ ಜನತೆಗೆ ಮಾಡುತ್ತಿರುವ ದ್ರೋಹ” ಎಂದು ಶಾಂತಕುಮಾರ್ ಕಿಡಿಕಾರಿದರು.
ಯೋಜನೆಯ ತಾಂತ್ರಿಕ ಲೋಪಗಳ ಕುರಿತು ಮಾತನಾಡಿದ ಅವರು, “ಈ ನೀರು ಕುಣಿಗಲ್ ದಾಟಿ ರಾಮನಗರ ಮತ್ತು ಬಿಡದಿಯತ್ತ ಹರಿಯಲಿದೆ. ಅಷ್ಟೇ ಅಲ್ಲದೆ, ಗುರುತ್ವಾಕರ್ಷಣೆ (Gravity) ಮೂಲಕ ಪೈಪ್‌ಲೈನ್ ಕಾಮಗಾರಿ ನಡೆಸಿರುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ನೀರು ಕುಣಿಗಲ್ ದಾಟಿ ಮುಂದೆ ಹೋಗುತ್ತದೆ. ಇದರಿಂದ ತಿಪಟೂರು ಮತ್ತು ತುರುವೇಕೆರೆ ಭಾಗದ ಜನರಿಗೆ ಹಾಗೂ ರೈತರಿಗೆ ಭಾರೀ ಅನ್ಯಾಯವಾಗಲಿದ್ದು, ಈ ಪ್ರದೇಶಗಳು ಅಪಾಯಕ್ಕೆ ಸಿಲುಕಲಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಜನರ ವಿಶ್ವಾಸಕ್ಕೆ ವಿರುದ್ಧವಾಗಿ ಜಿಲ್ಲೆಯ ನೀರನ್ನು ಬೇರೆಡೆಗೆ ಕೊಂಡೊಯ್ಯಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ರೈತರ ಹಿತರಕ್ಷಣೆಗಾಗಿ ನಾವು ಬೀದಿಗಿಳಿಯಲು ಸಿದ್ಧರಾಗುತ್ತಿದ್ದೇವೆ” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ಯುವ ಜೆಡಿಎಸ್ ಅಧ್ಯಕ್ಷ ಸುದರ್ಶನ್, ಗುರುಗದಳ್ಳಿ ನಟರಾಜ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


