ತಿಪಟೂರು : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 5/4 ಎನ್ ಸಿಸಿ ಕಂಪನಿಗೆ ಹೆಮ್ಮೆಯ ಕ್ಷಣವಾಗಿದ್ದು, ಕಾಲೇಜಿನ ಎನ್ ಸಿಸಿ ಕೆಡೆಟ್ ಗಳಾದ ಮನೋಜ್ (ಅಂತಿಮ ವರ್ಷದ ಬಿಬಿಎ), ಅಜಯ್ (ದ್ವಿತೀಯ ವರ್ಷದ ಬಿಸಿಎ), ಅಭಿಷೇಕ್ -– (ಬಿ.ಕಾಂ.) ಈ ಮೂವರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಲು ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಶಶಿಕುಮಾರ್. ಎಚ್.ಸಿ., ರಾಷ್ಟ್ರಸೇವೆ ಅತ್ಯುನ್ನತ ಕರ್ತವ್ಯವಾಗಿದೆ. ಈ ಯುವ ಅಗ್ನಿವೀರರು ತಮ್ಮ ಮುಂದಿನ ಪಯಣದಲ್ಲಿ ಧೈರ್ಯ, ಶಿಸ್ತು ಮತ್ತು ಸಮರ್ಪಣೆಯ ಮೌಲ್ಯಗಳನ್ನು ಸದಾ ಉಳಿಸಿಕೊಳ್ಳಲಿ. ರಾಷ್ಟ್ರಸೇವೆಯತ್ತ ಕೆಡೆಟ್ ಗಳು ತೋರಿದ ಸಮರ್ಪಣೆ, ಪರಿಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಅಲ್ಲದೆ, ಭಾರತೀಯ ಸೇನೆಯಲ್ಲಿ ಅವರ ಮುಂದಿನ ವೃತ್ತಿಜೀವನ ಯಶಸ್ವಿ ಹಾಗೂ ಉಜ್ವಲವಾಗಿರಲೆಂದು ಶುಭ ಹಾರೈಸಿದರು.
ಸಹಾಯಕ ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ.ವಿರೂಪಾಕ್ಷ ಜೆ.ಡಿ. ಮಾತನಾಡಿ, ಈ ಕಾರ್ಯಕ್ರಮವು ಎಲ್ಲಾ ವಿದ್ಯಾರ್ಥಿಗಳು ಹಾಗೂ ಎನ್ ಸಿಸಿ ಕೆಡೆಟ್ ಗಳಿಗೆ ಪ್ರೇರಣೆಯಾಗಿದ್ದು, ಶಿಸ್ತುಬದ್ಧ, ಜವಾಬ್ದಾರಿಯುತ ಮತ್ತು ದೇಶಭಕ್ತ ಯುವಜನರನ್ನು ರೂಪಿಸುವಲ್ಲಿ ಎನ್ ಸಿಸಿ ನೀಡುವ ಅವಕಾಶಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್ ಸಿಸಿ ಕೆಡೆಟ್ ಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


