ತುಮಕೂರು: ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಾಗಿರುವ ಹೇಮಾವತಿ ನೀರಿನ ನಮ್ಮ ಪಾಲನ್ನು ಮೀಸಲಿರಿಸಬೇಕು. ರೈತರ ಹಾಗೂ ಸಾರ್ವಜನಿಕರ ಹಿತ ಕಾಪಾಡುವುದು ಹಾಗೂ ಜಿಲ್ಲೆಯ ಕುಡಿಯುವ ನೀರಿಗೆ ಮಾರಕವಾಗಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಸರ್ಕಾರವನ್ನು ಒತ್ತಾಯಿಸಿದರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ಬಹು ದಿನಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಈ ಬಗ್ಗೆ ಸರ್ಕಾರ ಜಿಲ್ಲೆಯ ಜನರಪರವಾಗಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಈ ಯೋಜನೆಯಿಂದ ತುಮಕೂರು ಜಿಲ್ಲೆಗೆ ಮೀಸಲಿರುವ ಹೇಮಾವತಿ ನೀರಿನ ಪಾಲು ನ್ಯಾಯ ಸಮ ತವಾಗಿ ನಮಗೆ ದೊರೆಯುವುದಿಲ್ಲ ಎಂಬ ಆತಂಕ ನಮ್ಮದಾಗಿದೆ. ಈ ಯೋಜನೆಯು ಜಾರಿಗೊಂಡರೆ ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು.
ಹೇಮಾವತಿ ನಾಲಾ ವಲಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲಾ ಆಧುನೀಕರಣ ಕಾಮಗಾರಿಯು ಚಾಲ್ತಿಯಲ್ಲಿದ್ದು ಮುಗಿಯುವ ಹಂತದಲ್ಲಿದೆ. ಆದರೆ ಏಕಾಏಕಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವುದರಿಂದ ಸಾವಿರಾರು ಕೋಟಿ ಹಣ ಪೋಲಾಗುವುದರ ಜೊತೆಗೆ ಜಿಲ್ಲೆಯ ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ, ತುಮಕೂರು ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆವಣಿಗೆಯಾಗಿ, ಜನಸಂಖ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ನಮಗೆ ಮೀಸಲಿಡಬೇಕು. ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿರುವ ಹೇಮಾವತಿ ನೀರಿನ ನಮ್ಮ ಪಾಲನ್ನು ಮೀಸಲಿರಿಸಿ, ರೈತರ ಹಾಗೂ ಸಾರ್ವಜನಿಕರ ಹಿತ ಕಾಪಾಡುವುದು ಹಾಗೂ ಜಿಲ್ಲೆಗೆ ಮಾರಕವಾಗಿರುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಈ ಹಿಂದೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ಕೈಬಿಡಬೇಕೆಂದು ಹೋರಾಟ ನಡೆಸಿದಾಗ ಪಾಲ್ಗೊಂಡಿದ್ದ ರೈತರ ಮೇಲೆ, ರೈತ ಪರ ಸಂಘಟನೆಗಳ ಮುಖಂಡರ ಮೇಲೆ, ಸಾರ್ವಜನಿಕರ ಮೇಲೆ ಹಾಗೂ ಜನಪ್ರತಿನಿಧಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈಗಲೂ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ಕೈಬಿಡದಿದ್ದರೆ, ರೈತ ಸಂಘಗಳು, ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೊಳಗೊಂಡಂತೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ತುಮಕೂರು ನಗರ ಶಾಸಕರು ತಿಳಿಸಿದರು.
ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಆಗಿನ ಮುಖ್ಯಮಂತ್ರಿಯವರಾದ ಬಿ.ಎಸ್.ಯಡಿಯೂರಪ್ಪನವರು ಕೆನಾಲ್ ಅಭಿವೃದ್ಧಿಗೆ 500 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಪ್ರಸ್ತುತ ಶೇ.80 ರಷ್ಟು ಕೆಲಸ ಪೂರ್ಣಗೊಂಡಿದ್ದು, ಹೇಮಾವತಿ ನೀರು ಬುಗುಡನಹಳ್ಳಿ ಕೆರೆಗೆ ಸರಾಗವಾಗಿ ಬರುತ್ತಿದೆ. ತುಮಕೂರು ನಗರದ ಜನಸಂಖ್ಯೆ 5 ಲಕ್ಷ ದಾಟಿದ್ದು, ಕುಡಿಯುವ ನೀರಿಗಾಗಿ ಹೇಮಾವತಿಯನ್ನು ನಗರದ ಜನತೆ ಅವಲಂಬಿಸಿದ್ದಾರೆ. ಈ ಒಂದು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯು ತುಮಕೂರು ನಗರದ ಜನತೆಗೆ ಮರಣ ಶಾಸನವಾಗಿದೆ. ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ರಾಜ್ಯ ಸರ್ಕಾರ ಈ ಕೂಡಲೇ ಕೈಬಿಡಲಿ.
— ಜ್ಯೋತಿ ಗಣೇಶ್, ಶಾಸಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


