ತುಮಕೂರು: ರಾಜ್ಯದಲ್ಲಿರುವ ಪ್ರತಿಯೊಂದು ಮಠಮಾನ್ಯಗಳೂ ‘ಪುಸ್ತಕ ದಾಸೋಹ’ ನಡೆಸುವ ಮೂಲಕ ಜನರ ಬಳಿಗೆ ಪುಸ್ತಕಗಳನ್ನು ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ರಾಜ್ಯ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷರಾದ ಹುಲಿಕಲ್ ನಟರಾಜ್ ಅವರು ಕರೆ ನೀಡಿದ್ದಾರೆ.
ಕೊರಟಗೆರೆ ತಾಲೂಕಿನ ಶ್ರೀಕ್ಷೇತ್ರ ಸಿದ್ದರಬೆಟ್ಟದ ರಂಭಾಪುರಿ ಶಾಖಾಮಠದ 20ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಪುಸ್ತಕ ದಾಸೋಹ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪುಸ್ತಕಗಳು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮನ್ನು ಸುಜ್ಞಾನವಂತರನ್ನಾಗಿಸುತ್ತವೆ ಎಂದು ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು. ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಜನರ ಮನಸ್ಸನ್ನು ಮತ್ತೆ ಪುಸ್ತಕಗಳ ಕಡೆಗೆ ತಿರುಗಿಸುವ ಜವಾಬ್ದಾರಿಯನ್ನು ಪ್ರತಿಯೊಂದು ಮಠವೂ ತೆಗೆದುಕೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ರಂಭಾಪುರಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, “ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಮಠದಲ್ಲಿ ಯಶಸ್ವಿಯಾಗಿ ಪುಸ್ತಕ ದಾಸೋಹ ನಡೆಸಲಾಗುತ್ತಿದೆ. ಇಲ್ಲಿ ಭಕ್ತರು ಒಂದು ಪುಸ್ತಕವನ್ನು ನೀಡಿ, ಬದಲಿಗೆ ಎರಡು ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು” ಎಂದು ತಿಳಿಸುತ್ತಾ, ನೆರೆದಿದ್ದವರಿಗೆ ಪುಸ್ತಕ ದಾಸೋಹದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ದಯಾನಂದ, ಟಿ.ಎಲ್. ಸಿದ್ದಗಂಗಣ್ಣ, ತಿಮ್ಮರಾಜಮ್ಮ, ಸೌಭಾಗ್ಯಮ್ಮ, ಧರ್ಮಸ್ಥಳ ಸಂಘದ ಶೀನಪ್ಪ, ಅನಿತಾ ಸೇರಿದಂತೆ ಪ್ರಮುಖರು ಹಾಗೂ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




