ಕದರಿ (ಸತ್ಯಸಾಯಿ ಜಿಲ್ಲೆ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ಸಾರ್ವಜನಿಕವಾಗಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ತನ್ನ ಪತ್ನಿಯ ಗಂಟಲು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದರಿ ಪಟ್ಟಣದಲ್ಲಿ ನಡೆದಿದೆ. ಘಟನೆಯಿಂದ ಆಸ್ಪತ್ರೆಯ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮುಡಿಗುಬ್ಬ ಮಂಡಲದ ಈದುಲಪಲ್ಲಿ ಗ್ರಾಮದ ನಿವಾಸಿ ಗಂಗಾರಾಜು ಎಂಬಾತನೇ ಪತ್ನಿಯನ್ನು ಕೊಂದ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿ ಗಂಗಾರಾಜು ಮತ್ತು ಆತನ ಪತ್ನಿ ಸುನೀತಾ ನಡುವೆ ಕೆಲವು ಸಮಯದಿಂದ ದಾಂಪತ್ಯ ಕಲಹವಿತ್ತು. ಇತ್ತೀಚೆಗೆ ಗಂಗಾರಾಜು ಪತ್ನಿಗೆ ತೀವ್ರವಾಗಿ ಥಳಿಸಿದ್ದನು. ಇದರಿಂದ ಗಾಯಗೊಂಡಿದ್ದ ಸುನೀತಾಳನ್ನು ಆಕೆಯ ಪೋಷಕರು ಚಿಕಿತ್ಸೆಗಾಗಿ ಕದರಿಯ ಸರ್ಕಾರಿ ಪ್ರದೇಶ ಆಸ್ಪತ್ರೆಗೆ ದಾಖಲಿಸಿದ್ದರು.
ಬುಧವಾರ ಆಸ್ಪತ್ರೆಗೆ ಬಂದ ಗಂಗಾರಾಜು, ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗೋಣ ಎಂದು ಪತ್ನಿ ಸುನೀತಾಳನ್ನು ಒಪ್ಪಿಸಿದ್ದಾನೆ. ಪತಿಯ ಮಾತನ್ನು ನಂಬಿದ ಸುನೀತಾ ವಾರ್ಡ್ನಿಂದ ಹೊರಬಂದು ಆಸ್ಪತ್ರೆಯ ವರಾಂಡ ತಲುಪುತ್ತಿದ್ದಂತೆ, ಗಂಗಾರಾಜು ತಾನು ಮೊದಲೇ ತಂದಿದ್ದ ಚಾಕುವನ್ನು ತೆಗೆದು ಆಕೆಯ ಗಂಟಲು ಸೀಳಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುನೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಕದರಿ ಸಿಐ ನಾರಾಯಣ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, ಆರೋಪಿ ಗಂಗಾರಾಜುನನ್ನು ವಶಕ್ಕೆ ಪಡೆದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


