ಬೆಂಗಳೂರು: ರಾಜಧಾನಿಯ ಸದಾಶಿವನಗರದ ಪ್ರಸಿದ್ಧ ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತರನ್ನು ಚಿಕ್ಕಬಾಣವಾರದ ನಿವಾಸಿಯಾಗಿದ್ದ ತೇಜಸ್ವಿನಿ ರಾಜ್.ಪಿ (20) ಎಂದು ಗುರುತಿಸಲಾಗಿದೆ. ಈಕೆ ಚಿಕ್ಕಬಾಣಾವರ ಸಮೀಪದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ಕಾಲೇಜಿನಿಂದ ಹೊರಟಿದ್ದ ತೇಜಸ್ವಿನಿ, ತಾನು ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಹೋಗುತ್ತಿದ್ದು, ಸಾಯುತ್ತಿರುವುದಾಗಿ ತನ್ನ ಸ್ನೇಹಿತನಿಗೆ ಮೊಬೈಲ್‌ನಲ್ಲಿ ಸಂದೇಶ (ಮೆಸೇಜ್) ಕಳುಹಿಸಿದ್ದಾಳೆ. ಇದನ್ನು ನೋಡಿ ಗಾಬರಿಗೊಂಡ ಆ ಸ್ನೇಹಿತ, ತಕ್ಷಣವೇ ಆ ಸಂದೇಶವನ್ನು ತೇಜಸ್ವಿನಿ ತಾಯಿಗೆ ಫಾರ್ವರ್ಡ್ ಮಾಡಿ ವಿಷಯ ತಿಳಿಸಿದ್ದಾನೆ.
ಮಗಳ ಸಂದೇಶ ತಿಳಿಯುತ್ತಿದ್ದಂತೆ ಆತಂಕಗೊಂಡ ತಾಯಿ ಸದಾಶಿವನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಕುಟುಂಬದ ಸದಸ್ಯರು ಸೋಮವಾರ ತಡರಾತ್ರಿಯವರೆಗೂ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಂಗಳವಾರ ಬೆಳಗ್ಗೆ ಸ್ಯಾಂಕಿ ಕೆರೆಯಲ್ಲಿ ತೇಜಸ್ವಿನಿಯ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ.
ಪೊಲೀಸರು ಕೆರೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ತೇಜಸ್ವಿನಿ ಸೋಮವಾರ ಸಂಜೆ 4 ರಿಂದ 6 ಗಂಟೆಯವರೆಗೆ ಕೆರೆಯ ಆವರಣದಲ್ಲಿ ಓಡಾಡಿಕೊಂಡಿರುವುದು ಕಂಡುಬಂದಿದೆ. ಆ ಬಳಿಕ ತಡರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಸದಾಶಿವನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


