ಸರಗೂರು: ತಾಲೂಕಿನ ಮುಳ್ಳೂರು ಮತ್ತು ಬೆಣ್ಣೆಗೆರೆ ಗ್ರಾಮಸ್ಥರ ನಿದ್ದೆಗೆಡಿಸಿದ್ದ, ಜಾನುವಾರುಗಳನ್ನು ಬಲಿಪಡೆದು ಇಡೀ ಭಾಗದಲ್ಲಿ ಭೀತಿ ಸೃಷ್ಟಿಸಿದ್ದ 12 ವರ್ಷದ ಹೆಣ್ಣು ಹುಲಿ ಹಾಗೂ ಅದರ ಐದು ಮರಿಗಳನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಭಾನುವಾರ ಬೆಳಗಿನ ಜಾವ ಯಶಸ್ವಿಯಾಗಿದೆ.
ಕಳೆದ ಒಂದು ತಿಂಗಳಿನಿಂದ ನುಗು ವಲಯ ವ್ಯಾಪ್ತಿಯಲ್ಲಿ ಅಬ್ಬರಿಸುತ್ತಿದ್ದ ಈ ಹುಲಿರಾಯ ಕೊನೆಗೂ ಬೋನಿಗೆ ಬಿದ್ದಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಭಾಗದಲ್ಲಿ ಜಾನುವಾರುಗಳನ್ನು ಸತತವಾಗಿ ಬಲಿ ಪಡೆಯುತ್ತಿದ್ದ ಹುಲಿ, 15 ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬ ಯುವ ರೈತನ ಮೇಲೂ ದಾಳಿ ನಡೆಸಿ ಗಾಯಗೊಳಿಸಿತ್ತು. ಅಷ್ಟೇ ಅಲ್ಲದೆ, ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೂ ದಾಳಿ ನಡೆಸಿ ಗಾಯಗೊಳಿಸುವ ಮೂಲಕ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ವಾರದ ಹಿಂದಷ್ಟೇ ಅರಣ್ಯ ಇಲಾಖೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಹುಲಿಯ ಚಲನವಲನಗಳು ಸೆರೆಯಾಗಿದ್ದವು.
100 ಸಿಬ್ಬಂದಿ, 4 ಸಾಕಾನೆಗಳ ಬೃಹತ್ ಕಾರ್ಯಾಚರಣೆ:
ಸ್ಥಳೀಯರ ತೀವ್ರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ, ಶನಿವಾರ ರಾತ್ರಿಯಿಂದಲೇ ನುಗು ವಲಯ ವ್ಯಾಪ್ತಿಯಲ್ಲಿ ಭಾರಿ ಕಾರ್ಯಾಚರಣೆ (ಕೂಂಬಿಂಗ್) ಆರಂಭಿಸಿತ್ತು. ದಸರಾ ಆನೆಗಳಾದ ಅಭಿಮನ್ಯು, ಮಹೇಂದ್ರ, ಭಗಿರಥ ಹಾಗೂ ಈರಣ್ಯ ಎಂಬ ನಾಲ್ಕು ಸಾಕಾನೆಗಳನ್ನು ಮತ್ತು ಸುಮಾರು 100 ಮಂದಿ ಸಿಬ್ಬಂದಿಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಬೆಳಗಿನ ಜಾವ 3 ಗಂಟೆಗೆ ಡ್ರೋನ್ ನೆರವಿನಿಂದ ಸೆರೆ:
ಶನಿವಾರ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗಿತ್ತು. ಭಾನುವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬೆಣ್ಣೆಗೆರೆ ಗ್ರಾಮದ ಜಮೀನೊಂದರಲ್ಲಿ ಹುಲಿ ಇರುವ ಖಚಿತ ಮಾಹಿತಿ ಸಿಕ್ಕ ತಕ್ಷಣ ಅರಣ್ಯ ಇಲಾಖೆ ವೈದ್ಯರಾದ ಡಾ. ವಾಸಿಂ ಮಿರ್ಜಾ ಮತ್ತು ಡಾ. ಆದರ್ಶ್ ಮಾರ್ಗದರ್ಶನದಲ್ಲಿ, ಶಾರ್ಪ್ ಶೂಟರ್ಗಳಾದ ಅಕ್ರಂಪಾಷ ಮತ್ತು ರಂಜನ್ ಹುಲಿಗೆ ಯಶಸ್ವಿಯಾಗಿ ಅರಿವಳಿಕೆ ಚುಚ್ಚುಮದ್ದು (ಡಾರ್ಟ್) ನೀಡಿದರು. ತಾಯಿ ಹುಲಿ ಪ್ರಜ್ಞೆ ತಪ್ಪುತ್ತಿದ್ದಂತೆ, ಅದರ 5 ಮರಿಗಳೊಂದಿಗೆ ಇಡೀ ಹುಲಿ ಸಂಕುಲವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
“ಸದ್ಯ ಸೆರೆಸಿಕ್ಕ ಹೆಣ್ಣು ಹುಲಿ ಹಾಗೂ ಅದರ ಐದು ಮರಿಗಳನ್ನು ಬೆಂಗಳೂರಿನ ಬನ್ನೇರ್ಘಟ್ಟ ರಾಷ್ಟ್ರೀಯ ಉದ್ಯಾನವನದ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ರವಾನಿಸಲಾಗಿದೆ.”
— ಪರಮೇಶ್, ಎಸಿಎಫ್
ಈ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಡಿಸಿಎಫ್ ನಂದೀಶ್, ಎಸಿಎಫ್ ಪರಮೇಶ್, ನುಗು ವಲಯದ ಆರ್ಎಫ್ಓ ಅನೀತ್ ರಾಜ್, ಕಲ್ಕೆರೆ ವಲಯದ ಆರ್ಎಫ್ಓ ರಾಜೇಶ್, ಮೋಳೆಯೂರು ವಲಯದ ಆರ್ಎಫ್ಓ ನಾರಾಯಣ್ ಸೇರಿದಂತೆ ಎಸ್ ಟಿಪಿಎಫ್ (STPF) ಸಿಬ್ಬಂದಿ, ಚಿರತೆ ಪಡೆ ಹಾಗೂ ಆನೆ ಪಡೆಯ ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


