ಗುಬ್ಬಿ: ವಿಶಿಷ್ಟ ಆಚರಣೆ ಸಂಪ್ರದಾಯ ಮೂಲಕ ಬುಡಕಟ್ಟು ಮೂಲದ ಕಾಡು ಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಅವರು ಸೋಮಲಾಪುರ, ಬಿಳಿಗೆರೆ, ಕಂಚೀರಾಹಟ್ಟಿ, ಹೊಸಹಟ್ಟಿ, ಹೊಸಹಟ್ಟಿ, ಮೂಡಲಪಾಳ್ಯ ಹಾಗೂ ಜುಂಜಪ್ಪನ ಹಟ್ಟಿ ಗ್ರಾಮಗಳಲ್ಲಿ ಕಿರ್ಲೋಸ್ಕರ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಅಮಿತ್ ಶಾ ಅವರೊಂದಿಗೆ ಎಸ್ಟಿ ಮೀಸಲು ಬಗ್ಗೆ ಚರ್ಚಿಸಿದ್ದೇನೆ. ಪ್ರಧಾನಮಂತ್ರಿಗಳು ಸಹ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಹತ್ತು ತಿಂಗಳಲ್ಲಿ ಕಾಡು ಗೊಲ್ಲರಿಗೆ ಸಿಹಿ ಸುದ್ದಿ ಸಿಗಲಿದೆ. ಟಯೋಟಾ ಕಿರ್ಲೋಸ್ಕರ್ ಕಂಪೆನಿ ದೇಶದ ಉನ್ನತ ಉದ್ಯಮ ಕಂಪೆನಿ ಎನಿಸಿದೆ. ಅಲ್ಲಿನ 16 ಸಾವಿರ ಉದ್ಯೋಗಿಗಳು ಕನ್ನಡಿಗರು ಎಂಬುದು ನಮ್ಮ ಹೆಮ್ಮೆ. ಅಲ್ಲಿನ ಸಿಎಸ್‌ಆರ್ ಫಂಡ್ ಗೊಲ್ಲರ ಹಟ್ಟಿಗಳಿಗೆ ನೀರು ಒದಗಿಸುವ ಕೆಲಸಕ್ಕೆ ಬಳಸಲಾಗಿದೆ. ಕೆಲ ಹಟ್ಟಿಗಳಿಗೆ ರಸ್ತೆ ಅಭಿವೃದ್ಧಿ ಮಾಡುವ ಕೆಲಸಕ್ಕೂ ಅನುದಾನ ನೀಡಿದ್ದೇವೆ. ಈಗಾಗಲೇ 33 ಕೋಟಿ ರೂ. ಕೆಲಸಗಳಿಗೆ ಅಸ್ತು ಸಿಕ್ಕಿದೆ ಎಂದ ಅವರು, ಸಿದ್ಧಗಂಗಾ ಶ್ರೀಗಳು ಓದಿದ ನಾಗವಲ್ಲಿ ಶಾಲೆಗೆ ಎರಡು ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಲೋಕಸಭಾ ಸದಸ್ಯರು ಎಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದು ಸೋಮಣ್ಣ ಅವರು ರುಜುವಾತು ಮಾಡಿದ್ದಾರೆ. ಚುನಾವಣೆ ಹೊರತಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇದು 21 ನೇ ಶತಮಾನ. ನೀವು ಕಂದಾಚಾರ ಬಿಡಿ, ಇನ್ನಾದರೂ ಮುಖ್ಯ ವಾಹಿನಿಗೆ ಬನ್ನಿ. ಸದಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಸಂಸದರು ನಮಗೆ ಸಿಕ್ಕಿದ್ದಾರೆ. ಕಿರ್ಲೋಸ್ಕರ್ ನಂತಹ ಸಂಸ್ಥೆಯವರನ್ನು ಕರೆ ತಂದು ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುತ್ತಿದ್ದಾರೆ, ನಮ್ಮಲ್ಲಿ ಹೆಚ್‌ಎಂಟಿ ಇದೆ. ಅವರು ಸಹ ಸಿಎಸ್ ಆರ್ ಅನುದಾನದಲ್ಲಿ ತಾಲೂಕಿನ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ನಾನು ಕಳೆದ 25 ವರ್ಷಗಳಿಂದ ಮಾಜಿ ಸಂಸದ ಜಿ.ಎಸ್.ಬಸವರಾಜು ಜೊತೆ ಗುದ್ದಾಡಿಕೊಂಡು ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಈ ಸಂದರ್ಭದಲ್ಲಿ ಅರಿವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಕಾಡು ಗೊಲ್ಲ ಸಮಾಜದ ರಾಜ್ಯಧ್ಯಕ್ಷ ರಾಜಣ್ಣ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಜಿ.ಎನ್.ಬೆಟ್ಟಸ್ವಾಮಿ, ಕಲ್ಕಪಾಳ್ಯ ಲೋಕೇಶ್, ದಿಶಾ ಸಮಿತಿಯ ವೈ.ಹೆಚ್.ಹುಚ್ಚಯ್ಯ, ಡಾ.ನವ್ಯಾಬಾಬು, ಪಿ.ಬಿ.ಚಂದ್ರಶೇಖರಬಾಬು, ನಂಜೇಗೌಡ, ಸಾಗರನಹಳ್ಳಿ ವಿಜಯ್ ಕುಮಾರ್, ಹೆಚ್.ಟಿ.ಬೈರಪ್ಪ, ಬಿ.ಎಸ್. ಪಂಚಾಕ್ಷರಿ, ಸಾಗರನಹಳ್ಳಿ ನಂಜೇಗೌಡ, ಕೆ.ಬಿ. ಕೃಷ್ಣಪ್ಪ, ಕರಿಯಪ್ಪ, ಯಶೋಧಮ್ಮ, ಶಿವಣ್ಣ, ದೊಡ್ಡಯ್ಯ, ಕಿರ್ಲೋಸ್ಕರ್ ಸಂಸ್ಥೆಯ ಕಿರಣ್, ಪ್ರಶಾಂತ್, ವರುಣ್ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


