ತುಮಕೂರು: ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲಕರ ಯೋಜನೆಗಳಿದ್ದು, ಅವುಗಳ ಪ್ರಯೋಜನ ಪಡೆದು ಮುಂದೆ ಬರುವಂತೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ನಂಜೇಗೌಡ ಅವರು ಕರೆ ನೀಡಿದರು.
ಮಲ್ಲಸಂದ್ರದಲ್ಲಿರುವ ಡಾ.ಕುರಿಯನ್ ಸಭಾಂಗಣದಲ್ಲಿ ಶೆಟ್ಟಿಪ್ಪನಹಳ್ಳಿ ಹಾಗೂ ಬೇಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸದಸ್ಯರುಗಳಿಗೆ ಆಯೋಜಿಸಿದ್ದ ಕ್ಷೀರ ಸಂಜೀವಿನಿಯ ಯೋಜನೆಯ 6ನೇ ಹಂತದ ತರಬೇತಿ ಕಾರ್ಯಕ್ರಮ, ಅಂಚಿನ ಹಣದ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ಪೂರಕ ವಾತಾವರಣ ಇರಲಿಲ್ಲ. ಈಗ ಸಾಕಷ್ಟು ಅವಕಾಶಗಳಿವೆ. ಹಾಲು ಒಕ್ಕೂಟ, ಕ್ಷೀರ ಸಂಜೀವಿನಿ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ತರಬೇತಿಗಳು ಮತ್ತು ಸಹಾಯ ಧನದ ಆರ್ಥಿಕ ಅನುಕೂಲಗಳಿವೆ. ಇವುಗಳನ್ನು ಪಡೆದು ಕೊಂಡು ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು.
ಗ್ರಾಮೀಣ ಮಹಿಳೆಯರಿಗೆ ಹೈನುಗಾರಿಕೆ ಉತ್ತಮವಾದ ದಾರಿಯಾಗಿದೆ. ಗುಣಮಟ್ಟದ ಹಾಲು ಉತ್ಪಾದನೆಯ ಕಡೆಗೆ ಗಮನ ಹರಿಸಿ ನಂದಿನಿಯ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಸಂಘಟನೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸ್ಟೆಪ್ ಯೋಜನೆಯ ಮುಖ್ಯಸ್ಥರಾದ ವೈ.ಎಸ್.ಮಧು ಅವರ ಕಾರ್ಯವನ್ನು ಶ್ಲಾಘಿಸಿದರು.
ಎನ್ ಆರ್ ಎಲ್ ಎಂನ ಕಾಂತರಾಜು ಮಾತನಾಡಿ ಸಂಘದ ನಿಯಮಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು. ಕ್ಷೀರ ಸಂಜೀವಿನಿ ಯೋಜನೆಯಡಿಯಲ್ಲಿ ಸಂಘಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಸೌಲಭ್ಯಗಳು ಸಿಗಲು ಸಾಧ್ಯವಾಗುತ್ತದೆ ಎಂದರು.
ಸ್ಟೆಪ್ ಯೋಜನೆಯ ಮುಖ್ಯಸ್ಥರಾದ ವೈ.ಎಸ್.ಮಧು ಅವರು ಮಾತನಾಡಿ ಮಹಿಳಾ ಸಂಘಗಳ ಬಲವರ್ಧನೆಗಾಗಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆರ್ಥಿಕವಾಗಿ ಮುಂದೆ ಬರಲು ರಾಸುಗಳ ಖರೀದಿಗೆ ಹಣ ನೀಡಲಾಗುತ್ತದೆ. ಪ್ರತಿ ಸಂಘಕ್ಕೆ 7 ಲಕ್ಷ ರೂ.ಗಳನ್ನು ಅಂಚಿನ ಹಣದ ರೀತಿಯಲ್ಲಿ ನೀಡುತ್ತಿದ್ದು, ಫಲಾನುಭವಿಯು ಇದನ್ನು ಮರು ಪಾವತಿ ಮಾಡಬೇಕು. ಮಹಿಳಾ ಸಂಘದ ಸದಸ್ಯರಿಗಾಗಿ ಆರೋಗ್ಯ, ಪೌಷ್ಟಿಕ ಆಹಾರ, ಲಿಂಗ ಸಮಾನತೆ, ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಲಿಂಗ ಸಮಾನತೆ, ಮಹಿಳಾ ಕಾನೂನು ಕುರಿತು ಸಾಂತ್ವನ ಕೇಂದ್ರದ ಡಾ.ಚಿ.ರಾಜಕುಮಾರ್ ಮಾತನಾಡಿದರು.
ಕೆ.ಹಾ.ಮು. ಪಶು ಆಹಾರ ಘಟಕದ ಪ್ರಧಾನ ವ್ಯವಸ್ಥಾಪಕರಾದ ಗಿರೀಶ್, ಪುನೀತ್, ವ್ಯವಸ್ಥಾಪಕರಾದ ಚಂದ್ರಶೇಖರ ಕೆದನೂರಿ, ಶ್ರೀನಿವಾಸ್, ತಾಲೂಕು ಮುಖ್ಯಸ್ಥರಾದ ನಾಗರಾಜು, ಸ್ಟೆಪ್ ಯೋಜನೆ ವಿಸ್ತರಣಾಧಿಕಾರಿಗಳಾದ ಶ್ರೀಲಕ್ಷ್ಮಿ, ವಸುಧಾ, ಸಮಾಲೋಚನಾ ವಿಸ್ತರಣಾಧಿಕಾರಿಗಳಾದ ಗಿರೀಶ್, ರವಿ, ಚಂದನ, ಸ್ಟೆಪ್ ಅಧಿಕಾರಿಗಳಾದ ಭವ್ಯ, ರಂಜಿತ, ಶೆಟ್ಟಿಪ್ಪನಹಳ್ಳಿ ಸಂಘದ ಕಾರ್ಯದರ್ಶಿ ಸಾವಿತ್ರಮ್ಮ, ಬೇಗೂರು ಸಂಘದ ಕಾರ್ಯದರ್ಶಿ ಭಾಗ್ಯ, ಅಧ್ಯಕ್ಷರಾದ ದೀಪು, ವನಜ ಮೊದಲಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


