ಗುಬ್ಬಿ: ಬಿಡದಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಬಂಡವಾಳ ಹಾಕಿಕೊಂಡು ಪಾಲುದಾರಿಕೆ ಪಡೆದಿರುವಂತೆ ಕಾಣುತ್ತಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಖೇದಿಸಿದರು. ಅವರು ಸಿ.ಎಸ್.ಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ 1.35 ಕೋಟಿ ರೂ.ಗಳ ವೆಚ್ಚದ ಮನೆಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಬಿಡದಿ ಬಳಿಯ ಟೌನ್ ಶಿಪ್ ಯೋಜನೆ ಭಾಗದ ರೈತರು ಕೇವಲ ಅರ್ಧ ಎಕರೆ ಜಮೀನು ಹೊಂದಿದ್ದಾರೆ. ಹಸು ಕಟ್ಟಿಕೊಂಡು ಬದುಕು ನಡೆಸಿದ್ದಾರೆ. ಅಂತಹ ಸಣ್ಣ ರೈತರ ತಲೆ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಲು ಮುಂದಾಗಿದೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಬಿಡದಿ ಭಾಗದ ಯುವಕರಿಗೆ ಕೃಷಿ ಮತ್ತು ಹೈನುಗಾರಿಕೆ ಜೀವನ ಕಟ್ಟಿಕೊಟ್ಟಿದೆ. ಇಂತಹ ಯುವಕರ ಬದುಕಿನ ಜೊತೆ ಚಿಲ್ಲಾಟ ಸರಿಯಲ್ಲ. ದುಡ್ಡು ಹೊಡೆಯುವ ಸ್ಕೀಂ ಮಾಡುವ ಕೆಲಸ ಬಿಟ್ಟು ಸರ್ಕಾರ ರೈತಪರ ಕೆಲಸ ಮಾಡಬೇಕು ಎಂದರು.
ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆಗೆ ಕುಮಾರಸ್ವಾಮಿ ಆಲೋಚನೆ ಮಾಡಿದ್ದರು. ಆದರೆ ಅಲ್ಲಿನ ರೈತರ ಒತ್ತಡಕ್ಕೆ ಮಣಿದು ಯೋಜನೆ ಕೈಬಿಟ್ಟಿದ್ದರು. ಆದರೆ ಈಗ ಕಾಂಗ್ರೆಸ್ ರೈತರನ್ನು ಬೀದಿ ಪಾಲು ಮಾಡಿಯಾದರೂ ಯೋಜನೆಗೆ ಚಾಲನೆ ನೀಡಿದ್ದಾರೆ. ಇಲ್ಲೇ ತಿಳಿಯುತ್ತೆ ಕಾಂಗ್ರೆಸ್ ಪಾರ್ಟ್ನರ್ ಶಿಪ್ ಇದೆ ಎಂದು ಟೀಕಿಸಿದರು.
ಅಡ್ಡ ಮತದಾನ ಎಂಬುದು ನಂಬಿಸಿ ಕುತ್ತಿಗೆ ಕೊಯ್ಯುವ ಕೆಲಸವಾಗಿದೆ. ಪಕ್ಷ ನಂಬಿ ಶಾಸಕರಾಗಿ ಪಕ್ಷಕ್ಕೆ ನಿಷ್ಠೆ ಇರಬೇಕು. ಜೆಡಿಎಸ್ ಅಭ್ಯರ್ಥಿ ಹಾಕುವ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸಭೆ ನಡೆಸಿ ಎಲ್ಲಾ ಶಾಸಕರ ಸಮ್ಮತಿ ನಂತರವೇ ಅಭ್ಯರ್ಥಿ ನಿಲ್ಲಿಸಿದ್ದರು. ಕ್ರಾಸ್ ಮತ ನಾಲ್ಕು ಮಂದಿಯಿಂದ ಎನ್ನಲಾಗುತ್ತಿದೆ. ಇದು ನಂಬಿಕೆ ದ್ರೋಹ ಎಂದ ಅವರು, ಹೇಮಾವತಿ ನೀರು ಹಂಚಿಕೆಗಿಂತ ಹೆಚ್ಚು ಅಂದರೆ 7.5 ಟಿಎಂಸಿ ಕುಣಿಗಲ್ ತಾಲ್ಲೂಕಿಗೆ ಹರಿದಿದೆ. ಈಗಾಗಲೇ ಮಾಗಡಿಗೂ ನೀರು 0.65 ಎಂಟಿಎಫ್ ಹರಿದಿದೆ. ಪೈಪ್ ಲೈನ್ ಮಾಡುತ್ತಿರುವ ಕಾರಣ ಮಾತ್ರ ಮುಚ್ಚಿಟ್ಟು ಕೆಲಸ ಮಾಡಲು ಮುಂದಾಗುತ್ತಾರೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರು ಮುಖ್ಯ ನಾಲೆಯಲ್ಲಿ ಹರಿಯಬೇಕು. ಪೈಪ್ ಲೈನ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಜಿಲ್ಲೆಯ 24 ಲಕ್ಷ ರೈತರ ಬದುಕಿನ ಪ್ರಶ್ನೆ ಈ ನೀರಿನ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ನವೀನ್ ಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ಈಶ್ವರ್ ಗೌಡ, ಮಹಾಲಕ್ಷ್ಮಮ್ಮ, ಮುಖಂಡರಾದ ಲಕ್ಷ್ಮಿನಾರಾಯಣ್ (ಅಣ್ಣಿ), ಚನ್ನಿಗಪ್ಪ, ದೇವರಾಜ್, ರಮೇಶ್, ಗುತ್ತಿಗೆದಾರ ನಾಗರಾಜು ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




