ಔರಾದ್: ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ, ತಾಲೂಕು ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಜಂಟಿಯಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಔರಾದ್ ತಾಲ್ಲೂಕು ಪಂಚಾಯಿತ್ ಕಾರ್ಯನಿರ್ವಹಣಾಧಿಕಾರಿಗಳು (ಇಒ) ಮಾತನಾಡಿ, “ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಈಗಾಗಲೇ ಒಂದು ಕೈಪಂಪನ್ನು ದುರಸ್ತಿ ಮಾಡಿಕೊಡಲಾಗಿದೆ. ಗ್ರಾಮದಲ್ಲಿರುವ ಇನ್ನಷ್ಟು ನೀರಿನ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು,” ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅರವಿಂದ ಮಲ್ಲೀಗೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶರಣಪ್ಪ ಗಾದಿಗೆ, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಉಂಟಾಗಿದ್ದು, ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ನೀರಿಗಾಗಿ ದಿನನಿತ್ಯ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಗ್ರಾಮದ ದಲಿತರ ಓಣಿಯಲ್ಲಿ ಕಳೆದ ಹಲವಾರು ದಿನಗಳಿಂದ ಹನಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಓಣಿಯಲ್ಲಿ ಸದ್ಯ ಎರಡು ಹ್ಯಾಂಡ್ ಪಂಪ್ ಗಳು, ಮೂರು ಬೋರ್ ವೆಲ್ ಗಳು ಹಾಗೂ ಒಂದು ಬಾವಿ ಲಭ್ಯವಿದ್ದರೂ ಸಹ, ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ದಲಿತ ಸಮುದಾಯಕ್ಕೆ ನೀರು ಸಿಗದಂತಾಗಿದೆ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿತ್ತು.
ಈ ಕುರಿತು ಗ್ರಾಮದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಕನಿಷ್ಠ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ಅವರು ಈ ಮೊದಲು ದೂರಿದ್ದರು. ಜನರ ಸಮಸ್ಯೆಗೆ ಸ್ಪಂದಿಸದ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು.
ಸದ್ಯ ತಾಲೂಕು ಅಧಿಕಾರಿಗಳ ಭೇಟಿಯಿಂದಾಗಿ ತಾತ್ಕಾಲಿಕವಾಗಿ ಒಂದು ಕೈಪಂಪು ದುರಸ್ತಿಯಾಗಿದ್ದು, ಗ್ರಾಮಸ್ಥರು ಇನ್ನುಳಿದ ಸಮಸ್ಯೆಗಳೂ ಆದಷ್ಟು ಬೇಗ ಬಗೆಹರಿದು ತಮಗೆ ಶಾಶ್ವತ ನೀರಿನ ಸೌಲಭ್ಯ ಸಿಗಲಿ ಎಂದು ಕಾಯುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




