ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯ ಬೆನ್ನಲ್ಲೇ, ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಚುನಾವಣಾ ಆಯೋಗದಿಂದ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿರುವುದನ್ನು ತಿಳಿದ ನಟ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ (X) ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟ, “ಸ್ನೇಹಿತರೇ, ನಿಮಗೆ ಒಂದು ಜೋಕ್ ಹೇಳಬೇಕು. ಎಸ್ ಐಆರ್ ಬಳಿಕ ಬೆಂಗಳೂರಿನಲ್ಲಿ ಮತದಾನದ ಹಕ್ಕು ಕಳೆದುಕೊಂಡಿರುವ ಲಕ್ಷಾಂತರ ಮತದಾರರಲ್ಲಿ ನಾನೂ ಒಬ್ಬನಾಗಿದ್ದೇನೆ. ಇದು ನಿಜಕ್ಕೂ ಒಳ್ಳೆಯ ಜೋಕ್, ಈಗ ಆಟ ಶುರುವಾಗಿದೆ!” ಎಂದು ವ್ಯಂಗ್ಯವಾಡಿದ್ದಾರೆ.
“ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿದ್ದೇನೆ, ಇಲ್ಲೇ ಬೆಳೆದಿದ್ದೇನೆ. ನನ್ನ ಶಾಲೆ, ಕಾಲೇಜು ಹಾಗೂ ರಂಗಭೂಮಿ ಪಯಣ ಎಲ್ಲವೂ ಇಲ್ಲೇ ನಡೆದಿದೆ. ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ಇದೇ ಕ್ಷೇತ್ರದಿಂದ ನಾನು ಲೋಕಸಭೆ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದೆ. ಹೀಗಿದ್ದರೂ ನನ್ನ ಹೆಸರು ಪಟ್ಟಿಯಲ್ಲಿಲ್ಲ.”
ಕೇಂದ್ರ ಹಾಗೂ ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸಿರುವ ನಟ ಪ್ರಕಾಶ್ ರಾಜ್, #justasking ಹ್ಯಾಶ್‌ಟ್ಯಾಗ್ ಬಳಸಿ, “ಕೆಲವರು ತಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಕೆಲವು ನಾಗರಿಕರ ಮತದಾನದ ಹಕ್ಕನ್ನು ನಿರಾಕರಿಸಲು ತಮ್ಮ ಅಧಿಕಾರವನ್ನು ಬಳಸಬಹುದು. ಆದರೆ, ಅಂತಿಮವಾಗಿ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ನಿಮ್ಮಿಂದ ಸಾಧ್ಯವೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮತದಾರರ ಗುರುತಿನ ಚೀಟಿ ಹಾಗೂ ಮತದಾನದ ಹಕ್ಕನ್ನು ಮರಳಿ ಪಡೆಯಲು ಮುಂದಿನ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಎಸ್ ಐಆರ್ (SIR) ಅಡಿಯಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಆಕ್ಷೇಪಣೆಗಳು ಹಾಗೂ ವಿವರಗಳಲ್ಲಿ ವ್ಯತ್ಯಾಸವಿದ್ದರೆ ಪರಿಶೀಲಿಸಿಕೊಂಡು ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
