ತುಮಕೂರು: ಇದೇ ಜೂ.28ರಂದು ಭಾನುವಾರ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ 5 ವರ್ಷದೊಳಗಿನ 1,86,831 ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಯೋಜಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಪೋಲಿಯೋ ನಿವಾರಣೆಯಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಜೂನ್ 28ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಆಂದೋಲನ ರೂಪದಲ್ಲಿ ಕಾರ್ಯಕ್ರಮ ರೂಪಿಸಿರುವುದಾಗಿ ಅವರು ತಿಳಿಸಿದರು.
5 ವರ್ಷದೊಳಗಿನ 1,86,831 ಮಕ್ಕಳನ್ನು ಗುರುತಿಸಲಾಗಿದ್ದು, 1219 ಲಸಿಕಾ ಕೇಂದ್ರಗಳು ಹಾಗೂ 60 ಟ್ರಾನ್ಸಿಟ್ ಕೇಂದ್ರಗಳಲ್ಲಿ 5,122 ಲಸಿಕಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಲ್ಲದೆ, 265 ಮೇಲ್ವಿಚಾರಕರನ್ನು ಲಸಿಕಾ ಕಾರ್ಯಕ್ರಮಕ್ಕೆ ನೇಮಿಸಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ಜೂನ್ 28ರಂದು ಲಸಿಕಾ ಭಾನುವಾರವಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ನಂತರ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ದಿನ ಹಾಗೂ ನಗರ ಪ್ರದೇಶದಲ್ಲಿ 3 ದಿನಗಳ ಕಾಲ ಮನೆ–ಮನೆಗೆ ಭೇಟಿ ನೀಡಿ ಯಾವ ಮಕ್ಕಳು ಬಿಟ್ಟು ಹೋಗದಂತೆ ಲಸಿಕೆ ನೀಡುವ ಯೋಜನೆಯನ್ನು ರೂಪಿಸಿರುವುದಾಗಿ ತಿಳಿಸಿ, ಈ ಸಂಬಂಧ ವ್ಯಾಪಕ ಜಾಥಾ, ಪ್ರಾರ್ಥನಾ ಸಭೆ,ಪ್ರಚಾರ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.
ಬೆಸ್ಕಾಂ ವತಿಯಿಂದ ಲಸಿಕೆ ಶೇಖರಣೆ ಶೀತಲೀಕರಣ ಘಟಕ ನಿರಂತರವಾಗಿ ಕಾರ್ಯನಿರ್ವಹಿಸಬೇಕಿರುವುದರಿಂದ ನಿರಂತರ ವಿದ್ಯುತ್ ವ್ಯವಸ್ಥೆಗೆ ಈಗಾಗಲೇ ಜಿಲ್ಲಾಧಿಕಾರಿಗಳು ಇಲಾಖೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಸಾರಿಗೆ, ಕಾರ್ಮಿಕ ಇಲಾಖೆ ಹಾಗೂ ರೋಟರಿ ಸಂಸ್ಥೆ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆರ್ಸಿಎಚ್ ಅಧಿಕಾರಿ ಡಾ.ಮೋಹನ್, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




