ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಪ್ರಮುಖ ಸಭೆಯಲ್ಲಿ, ಎಲ್ಲಾ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ದಸಂಸ ಜಿಲ್ಲಾ ಸಮಿತಿಯ ವಿವಿಧ ಬಣಗಳ ಸಂಚಾಲಕರು, “ದಲಿತ ಸಂಘರ್ಷ ಒಕ್ಕೂಟವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಬದಲಿಗೆ, ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ನೊಂದವರ ಧ್ವನಿಯಾಗಿ ಹೋರಾಟ ನಡೆಸುವುದು ನಮ್ಮ ಮುಖ್ಯ ಗುರಿಯಾಗಿದೆ” ಎಂದು ತಿಳಿಸಿದರು. ಇದೇ ವೇಳೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಅವರಿಗೆ ಎಲ್ಲರೂ ಶುಭ ಹಾರೈಸಿದರು.
ಬಳಿಕ ಮಾತನಾಡಿದ ನೂತನ ಒಕ್ಕೂಟ ಉಸ್ತುವಾರಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ, “ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಗೌರವಿಸುವ ಜೊತೆಗೆ ಅದನ್ನು ರಕ್ಷಿಸುವ ಕೆಲಸವನ್ನು ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕಿದೆ. ಸಮಾಜದ ಹಾಗೂ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಒಗ್ಗೂಡಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಸಂಘಟನಾ ಸಂಚಾಲಕರ ಸಲಹೆ, ಸಹಕಾರವನ್ನು ಪಡೆದು ಸಮಾಜದ ಹಿತಾಸಕ್ತಿಗಾಗಿ ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ದೊಡ್ಡಸಿದ್ದು, ಎಸ್.ಡಿ. ಸಣ್ಣಸ್ವಾಮಿ, ಶಿವಶಂಕರ ದೇವಲಾಪುರ, ಗೋಪಾಲ್ ಬಿಡುಗಲು, ಹುನಗಹಳ್ಳಿ ಗೋವಿಂದ ಹಾಗೂ ತಾಲೂಕು ಸಂಚಾಲಕರಾದ ಮಹೇಶ್ ಕುಮಾರ್ ದೇವಲಾಪುರ, ಕೂಡಗಿ ಗೋವಿಂದ ರಾಜು, ಹಾದನೂರು ಚಂದ್ರ, ಅಣ್ಣಯ್ಯ ಸ್ವಾಮಿ ಕಂದೇಗಾಲ, ನಾಗಣ್ಣ ಹಳೆಯೂರು ಮತ್ತು ಪ್ರಮುಖರಾದ ಹುಚ್ಚಯ್ಯ, ಶಿವಕುಮಾರ್, ರಮೇಶ, ಚಿಕ್ಕಣ್ಣ ಇಟ್ನ, ಸೋಮೇಶ್ ನೇರಳೆ, ಚಿನ್ನಯ್ಯ, ಪುಟ್ಟ, ಕಾರಯ್ಯ, ಪುಟ್ಮಮಾದು, ಮಹದೇವಸ್ವಾಮಿ, ದೇವಣ್ಣ, ಜಿಲೇಂದ್ರ, ಕೃಷ್ಣ, ದೇವರಾಜು, ಮಂಜು ಸೇರಿದಂತೆ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


