ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಯಶವಂತಪುರ ಗ್ರಾಮದ ನಿವಾಸಿಯಾದ ಡಿ.ಸುರೇಶ್ ಅವರು ಮುಂಬಡ್ತಿ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ (BEO) ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ, ಅವರ ಸ್ವಗ್ರಾಮದ ನಿವಾಸಿಗಳು ಹಾಗೂ ಶಿಕ್ಷಕ ವೃಂದದವರು ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸಿ ಸನ್ಮಾನಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಯಶವಂತಪುರ ಶಿವಲಿಂಗಯ್ಯ, “ಡಿ.ಸುರೇಶ್ ಅವರು ನಮ್ಮ ಕಾಡಂಚಿನ ಕಟ್ಟಕಡೆಯ ಗ್ರಾಮದ ಹೆಮ್ಮೆಯ ಪುತ್ರ. ನಮ್ಮ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಬಾಲ್ಯದಲ್ಲಿ ತಂದೆ–ತಾಯಿಗೆ ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಲೇ ಉನ್ನತ ವ್ಯಾಸಂಗ ಪೂರೈಸಿದರು. ನಮ್ಮ ಗ್ರಾಮದ ಮೊಟ್ಟಮೊದಲ ಸರ್ಕಾರಿ ನೌಕರರಾಗಿ ಶಿಕ್ಷಣ ಇಲಾಖೆಗೆ ಪಾದರ್ಪಣೆ ಮಾಡಿದ ಇವರು ರಾಯಚೂರು, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ,” ಎಂದು ಸ್ಮರಿಸಿದರು.
ಮುಂದುವರಿದು ಮಾತನಾಡಿದ ಅವರು, “ಸುರೇಶ್ ಅವರು ಹೆಗ್ಗಡದೇವನಕೋಟೆ ತಾಲೂಕಿನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರಾಗಿ ಸುಮಾರು 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಹೆಚ್.ಡಿ. ಕೋಟೆ ತಾಲೂಕಿನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಾಗೂ ಕಂಚಮಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿಯೂ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂತಹ ದಕ್ಷ ಅಧಿಕಾರಿ ಈಗ ಮುಂಬಡ್ತಿ ಪಡೆದು ಪುತ್ತೂರು ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವುದು ನಮ್ಮ ಇಡೀ ಗ್ರಾಮ ಮತ್ತು ತಾಲೂಕಿಗೆ ಕೀರ್ತಿ ತಂದಿದೆ. ಇವರು ನಮ್ಮ ಗ್ರಾಮದ ಇಂದಿನ ಮತ್ತು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆ ಹಾಗೂ ಮಾದರಿಯಾಗಿದ್ದಾರೆ,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಯಶವಂತಪುರ ಗ್ರಾಮಸ್ಥರು, ವಿವಿಧ ಶಾಲೆಗಳ ಶಿಕ್ಷಕ ವೃಂದದವರು ಹಾಗೂ ಪ್ರಮುಖರು ಉಪಸ್ಥಿತರಿದ್ದು, ಡಿ.ಸುರೇಶ್ ಅವರಿಗೆ ಮುಂದಿನ ಸೇವೆಗೆ ಶುಭ ಹಾರೈಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


