ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಗೋಟಾ (ಹಾಳಗೋರ್ಟಾ) ಗ್ರಾಮದಲ್ಲಿ ಶನಿವಾರ ಮುಂಜಾನೆ ಅತ್ಯಂತ ಕರುಣಾಜನಕ ಹಾಗೂ ಬರ್ಬರ ಘಟನೆಯೊಂದು ನಡೆದಿದೆ.
ಮನೆಯೊಳಗೆ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಸಂಬಂಧಿಕನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅನಿತಾ (32) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ.
ಆರೋಪಿಯನ್ನು ಅದೇ ಗ್ರಾಮದ ಕೈಲಾಸ್ ವೈಜಿನಾಥ್ (ಕೈಲಾಸ್ ಬಿರಾದಾರ್) ಎಂದು ಗುರುತಿಸಲಾಗಿದ್ದು, ಈತ ಮೃತ ಮಹಿಳೆಯ ಸಂಬಂಧಿ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಶನಿವಾರ ಬೆಳಿಗ್ಗೆ ಅನಿತಾ ಅವರು ತಮ್ಮ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಸಂಚು ರೂಪಿಸಿ ನುಗ್ಗಿದ ಆರೋಪಿ ಕೈಲಾಸ್, ಏಕಾಏಕಿ ಕೊಡಲಿಯಿಂದ ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಅನಿತಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಖಟಕಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಗೆ ಕಾರಣ ನಿಗೂಢ: ಸಂಬಂಧಿಕನೇ ಆಗಿರುವ ಕೈಲಾಸ್, ಅನಿತಾ ಅವರನ್ನೇ ಗುರಿಯಾಗಿಸಿಕೊಂಡು ಇಷ್ಟೊಂದು ಕ್ರೂರವಾಗಿ ಹತ್ಯೆ ಮಾಡಲು ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಹಳೇ ದ್ವೇಷ ಅಥವಾ ಕೌಟುಂಬಿಕ ಕಲಹ ಇದರ ಹಿಂದೆ ಇದೆಯೇ ಎಂಬ ನಿಟ್ಟಿನಲ್ಲಿ ಖಟಕಚಿಂಚೋಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


