ತಿಪಟೂರು: ಕೇವಲ 9.50 (ಒಂಭತ್ತುವರೆ) ರೂಪಾಯಿಗೋಸ್ಕರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಎಸ್ಬಿಐ ವ್ಯವಸ್ಥಾಪಕರು ರೈತನಿಗೆ ನೋಟಿಸ್ ನೀಡಿ, ಎಡವಟ್ಟು ಮಾಡಿದ್ದು ರೈತ ಕಂಗಾಲಾಗಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ.
ಬಿಳಿಗೆರೆ ಗ್ರಾಮದ ಬಿ.ಸಿ. ಪ್ರಭುಸ್ವಾಮಿ ಎಂಬ ರೈತ ಎಸ್ಬಿಐನಿಂದ ಕೆಸಿಸಿ ಸಾಲದಲ್ಲಿ ಸುಮಾರು 15 ವರ್ಷಗಳ ಹಿಂದೆ 3 ಲಕ್ಷ ಸಾಲ ಪಡೆದು, ಪಡೆದ ವರ್ಷದಲ್ಲಿ ಸಾಲವನ್ನು ಬ್ಯಾಂಕಿಗೆ ಕಟ್ಟಿ ಸಾಲದಿಂದ ಮುಕ್ತರಾಗಿರುತ್ತಾರೆ. ಪಹಣಿಯಲ್ಲಿಯೂ ಎಸ್ಬಿಐಗೆ ಆಧಾರ ಎಂದು ನಮೂದಾಗಿರುವುದಿಲ್ಲ. ಆದರೆ ಜೂನ್ 18ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಮ್ಮ ತಂದೆಯವರಿಗೆ ನೋಟಿಸ್ ನೀಡಿ, ನೀವು ಕಟ್ಟಬೇಕಾದ ಹಣ 9 ರೂಪಾಯಿ, 50 ಪೈಸೆ ಹಣವನ್ನು ಕಟ್ಟಿ ಇಲ್ಲವಾದರೆ, ಜುಲೈ 11ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.
ಈ ಬಾಕಿ ಉಳಿದಿರುವ ಹಣವನ್ನು ಕಟ್ಟದೆ ಇದ್ದಲ್ಲಿ ಮತ್ತು ನ್ಯಾಯಾಲಯಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದು, ನಮ್ಮ ತಂದೆ ಯವರು ಗಾಬರಿಗೊಂಡಿದ್ದಾರೆ. ಕೂಡಲೇ ನಮಗೆ ನೋಟಿಸ್ ನೀಡಿದ ಎಸ್ಬಿಐ ಬ್ಯಾಂಕಿನ ವ್ಯವಸ್ಥಾಪಕನ ಮೇಲೆ ಕ್ರಮ ಜರುಗಿಸುವಂತೆ ಪ್ರಭುಸ್ವಾಮಿ ಮಗ ಪ್ರವೀಣ್ ಒತ್ತಾಯಿಸಿದ್ದಾರೆ.
ರೈತ ಸಂಘ ಮತ್ತು ಹಸಿರು ಸೇನೆ ತಾ.ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಈ ಭಾಗದ ರೈತರಿಗೆ ನೋಟಿಸ್ಗಳನ್ನು ನೀಡಿ, ತೊಂದರೆ ಪಡಿಸುತ್ತಿದ್ದಾರೆ. ಕೆಲವು ರೈತರು ಸುಮಾರು ವರ್ಷಗಳ ಹಿಂದೆ ಪಡೆದಿರುವ ಸಾಲವನ್ನು ಹಿಂದಿರುಗಿಸಿದ್ದು, ಯಾಕೆ ಈ ರೀತಿ ಬ್ಯಾಂಕಿನ ವ್ಯವಸ್ಥಾಪಕರು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಬಂದಿದೆ. ಕೂಡಲೆ ಸಂಬಂಧಪಟ್ಟ ಇಲಾಖೆ ಮತ್ತು ಬ್ಯಾಂಕಿನ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ, ಬಿಳಿಗೆರೆ ಎಸ್ ಬಿಐ ಬ್ಯಾಂಕಿನ ವ್ಯವಸ್ಥಾಪಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಒಟ್ಟಾರೆ ದೇಶದಲ್ಲಿ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆದ ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಸೇರಿದಂತೆ ದೇಶದಲ್ಲಿ ಸಾರ್ವಜನಿಕರ ಹಣವನ್ನು ತಿಂದು ತೇಗಿ, ಹೆಗ್ಗಣದಂತೆ ಇರುವ ದೇಶದ ಕೆಲವು ಉದ್ಯಮಿಗಳು, ಚುನಾಯಿತ ಜನಪ್ರತಿನಿಧಿಗಳು ದೇಶ ತೊರೆದಿದ್ದಾರೆ. ಅಂತಹವರನ್ನು ಬ್ಯಾಂಕುಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸದೆ ಬಡಪಾಯಿ ರೈತರನ್ನು ಕೇವಲ ಸಾವಿರ ರೂಗಳಿಗೆ ಮತ್ತು ಚಿಲ್ಲರೆ ರೂಪಾಯಿಗಳಿಗೆ ನೋಟಿಸ್ ನೀಡಿ ಅವಮಾನಿಸಿರುವುದು ದೇಶದ ಸ್ಥಿತಿ ಏನಾಗುತ್ತಿದೆ ಎನ್ನುವ ಆತಂಕವನ್ನು ಸೃಷ್ಟಿಸುವಂತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


