ನವದೆಹಲಿ: ಮನೆಕೆಲಸದಾಕೆಯ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ನಾಯಕ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಪ್ರಕರಣದಲ್ಲಿ ಹೆಚ್.ಡಿ. ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವುದು) ಅಡಿಯಲ್ಲಿನ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, ರಾಜ್ಯ ಸರ್ಕಾರದ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರೇವಣ್ಣ ಅವರಿಗೆ ನೋಟಿಸ್ ನೀಡಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪೀಠವು, “ಮನೆಕೆಲಸದಾಕೆಯ ಮೇಲಿನ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೈಕೋರ್ಟ್ ಹಲ್ಲೆಯ ಆರೋಪವನ್ನು ಕೈಬಿಟ್ಟಿದ್ದು ಹೇಗೆ? ಕೇವಲ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಾತ್ರ ವಿಚಾರಣೆ ನಡೆಸುವಂತೆ ಸೂಚಿಸಿ, ಆರೋಪಿಯ ವಿರುದ್ಧದ ಚಾರ್ಜ್‌ಗಳನ್ನು ಕೋರ್ಟ್ ಹೇಗೆ ಬದಲಾಯಿಸಿತು?” ಎಂದು ಪ್ರಶ್ನಿಸಿದೆ. ಅಲ್ಲದೆ, “ಮಗ ಪ್ರಜ್ವಲ್ ರೇವಣ್ಣ ಮೇಲಿರುವುದು ಅತ್ಯಾಚಾರದ ಆರೋಪ, ತಂದೆ ರೇವಣ್ಣ ಮೇಲೂ ಬೇರೆ ಆರೋಪಗಳಿವೆ. ಇಬ್ಬರ ಮೇಲೂ ಭಿನ್ನವಾದ ಆರೋಪಗಳಿರುವಾಗ ಹೈಕೋರ್ಟ್ ಈ ರೀತಿ ಚಾರ್ಜ್‌ಗಳನ್ನು ಹೇಗೆ ಬದಲಾಯಿಸಬಹುದು?” ಎಂದು ವಿವರಣೆ ಕೇಳಿದೆ.
ಇದೇ ವೇಳೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿತು. “ಹೈಕೋರ್ಟ್ ಈ ಆದೇಶವನ್ನು 2025ರ ಡಿಸೆಂಬರ್ ನಲ್ಲಿ ನೀಡಿದೆ. ಆದರೆ ಅದನ್ನು ಈಗ (2026ರಲ್ಲಿ) ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತಿರುವುದೇಕೆ? ಹೈಕೋರ್ಟ್ ಆರೋಪಗಳನ್ನು ಕೈಬಿಟ್ಟ ತಕ್ಷಣವೇ ಏಕೆ ತಕರಾರು ಸಲ್ಲಿಸಲಿಲ್ಲ?” ಎಂದು ಪ್ರಶ್ನಿಸಿದ ನ್ಯಾಯಾಲಯ, ನ್ಯಾಯಾಂಗದ ಶಿಸ್ತನ್ನು ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
2025ರ ನವೆಂಬರ್ 19 ರಂದು ಹೈಕೋರ್ಟ್, ರೇವಣ್ಣ ಅವರ ವಿರುದ್ಧದ ಸೆಕ್ಷನ್ 354ರ ಅಡಿಯ ಗಂಭೀರ ಆರೋಪವನ್ನು ರದ್ದುಗೊಳಿಸಿ, ಅದನ್ನು ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪರಿಗಣಿಸುವಂತೆ ಸೂಚಿಸಿತ್ತು. ದೂರಿನ ಅಂಶಗಳು ಗಂಭೀರ ಅಪರಾಧಕ್ಕಿಂತ ಹೆಚ್ಚಾಗಿ ಲೈಂಗಿಕ ಕಿರುಕುಳಕ್ಕೆ ಹೊಂದಿಕೆಯಾಗುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದರ ಬೆನ್ನಲ್ಲೇ, 2025ರ ಡಿಸೆಂಬರ್ 29 ರಂದು ವಿಚಾರಣಾ ನ್ಯಾಯಾಲಯವು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹೆಚ್.ಡಿ. ರೇವಣ್ಣ ಅವರನ್ನು ಖುಲಾಸೆಗೊಳಿಸಿತ್ತು.
ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ. ರೇವಣ್ಣ ಹಾಗೂ ಅವರ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 2024ರ ಏಪ್ರಿಲ್ 28 ರಂದು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


