ತಿಪಟೂರು: ನಗರದ ರೈಲ್ವೆ ನಿಲ್ದಾಣವನ್ನು ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಸಮಗ್ರವಾಗಿ ಪುನರ್ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ, ನೂತನ ಮೆಮು ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ನಿಲ್ದಾಣದ ಕಟ್ಟಡದ ವಿಸ್ತರಣೆ, ಹೊಸ ಪ್ಲಾಟ್ ಫಾರ್ಮ್ ಶೆಡ್‌ಗಳ ನಿರ್ಮಾಣ, ಮೂರು ಲಿಫ್ಟ್‌ಗಳು ಸೇರಿದಂತೆ, ಎರಡು ಎಸ್ಕಲೇಟರ್‌ಗಳು, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ಸೇರಿದಂತೆ ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳ ಮೂಲಕ ಹೈಟೆಕ್ ಸ್ಪರ್ಶ ನೀಡುತ್ತಿದ್ದೇವೆ. ಈ ಭಾಗದ ಸಾರ್ವಜನಿಕರ ಬಹು ಬೇಡಿಕೆಯಾದ ಮಧ್ಯಾಹ್ನದ ಸಮಯದಲ್ಲಿ ರೈಲು ಅವಶ್ಯಕತೆ ಇದ್ದು, ನೂತನವಾಗಿ ವಿಶೇಷ ಮೆಮು ರೈಲಿಗೆ ಹಸಿರು ನಿಶಾನೆ ತೋರಿಸಿದೆ ಎಂದು ತಿಳಿಸಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ (ಹೆಬ್ಬಾಕ), ದಿಶಾ ಸಮಿತಿ ಸದಸ್ಯ ಆಯರಹಳ್ಳಿ ಶಂಕರಪ್ಪ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಶಿಕಿರಣ್, ರಾಮಿ ಮತ್ತು ವಿಶ್ವ ದೀಪ್ ಸೇರಿದಂತೆ ನೈರುತ್ಯ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮುಖಂಡರು ಇದ್ದರು.
ಭಾನುವಾರ ಹೊರತುಪಡಿಸಿ ಪ್ರತಿದಿನ ನೂತನ ಮೆಮು ವಿಶೇಷ ರೈಲು ಯಲಹಂಕದಿಂದ ಬೆಳಿಗ್ಗೆ 6–45 ಕ್ಕೆ ಹೊರಟು ಅರಸೀಕೆರೆಗೆ 11 ಗಂಟೆಗೆ ಬರಲಿದೆ. ಮಧ್ಯಾಹ್ನ 2.10 ಕ್ಕೆ ಅರಸೀಕೆರೆಯಿಂದ ತಿಪಟೂರು ಮಾರ್ಗವಾಗಿ ತುಮಕೂರು, ಯಶವಂತಪುರ ಮೂಲಕ ಸಂಜೆ 7–15ಕ್ಕೆ ಯಲಹಂಕ ತಲುಪಲಿದೆ. ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಸುರಕ್ಷಿತ, ಆಧುನಿಕ ಹಾಗೂ ಉತ್ತಮ ಗುಣಮಟ್ಟದ ರೈಲು ಸೇವೆ ಒದಗಿಸಲು ತನ್ನ ಬದ್ಧತೆ ಮುಂದುವರಿಸಿದೆ.
— ವಿ.ಸೋಮಣ್ಣ ಕೇಂದ್ರ ರೈಲ್ವೆ – ಜಲ ಶಕ್ತಿ ಖಾತೆ ರಾಜ್ಯ ಸಚಿವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


