ತುಮಕೂರು: ವಿಶ್ವವಿದ್ಯಾನಿಲಯಗಳು ಸಂಖ್ಯೆಯಲ್ಲಿ ವಿಸ್ತರಣೆಯಾಗದೆ ಗುಣಮಟ್ಟದಲ್ಲಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ಯುಜಿಸಿ ಗಮನಹರಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್‌ನ ಬಿದರಕಟ್ಟೆಯಲ್ಲಿ ಸೋಮವಾರ ನಡೆದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ 1200 ವಿಶ್ವವಿದ್ಯಾನಿಲಯಗಳು ಇದ್ದು, 43,000 ಕಾಲೇಜುಗಳು ಹಾಗೂ 43 ದಶಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ದೇಶದ ಬಹುದೊಡ್ಡ ಪರಿವರ್ತನೆ. ಆದರೆ ಜಾಗತಿಕವಾಗಿ ಉದ್ಯಮ ಮತ್ತು ಶಿಕ್ಷಣದ ನಡುವೆ ಅಂತರವಿದ್ದು, ತಾವು ಕೊಡುವ ಶಿಕ್ಷಣ ಉದ್ಯಮಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದಕ್ಕಾಗಿ ಬೋಧಕರ ಕೊರತೆ ನೀಗಿಸಬೇಕು ಹಾಗೂ ಪ್ರಾದೇಶಿಕವಾಗಿ ಸಮಾನಾಂತರ ಬೋಧನೆಗೆ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಭಾರತದ ಇತಿಹಾಸದಲ್ಲಿ ಮೊದಲಿನಿಂದಲೂ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದ ಉಪಮುಖ್ಯಮಂತ್ರಿ ಡಾ: ಪರಮೇಶ್ವರ್ ಅವರು, ವಿಶ್ವದ ವಿವಿಧೆಡೆಯಿಂದ ತಕ್ಷಶಿಲಾ ಹಾಗೂ ನಳಂದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬರುತ್ತಿದ್ದರು. ಅಂದಿನಿಂದಲೂ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿರುವುದು ಇತಿಹಾಸದ ಮೂಲಕ ತಿಳಿಯುತ್ತದೆ. ಬ್ರಿಟಿಷರ ಆಡಳಿತದಲ್ಲಿ 1857ರಲ್ಲಿ ಮೊದಲ ಬಾರಿಗೆ ಕಲ್ಕತ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ನಂತರ ಮದ್ರಾಸ್, ಮೈಸೂರು ವಿಶ್ವವಿದ್ಯಾಲಯಗಳು ಆರಂಭವಾದವು. 2004ರಲ್ಲಿ ತುಮಕೂರು ವಿವಿಯನ್ನು ಆರಂಭಿಸಲು ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರು ಅನುಮತಿಕೊಟ್ಟಿದ್ದು, ಈ ಮಟ್ಟಕ್ಕೆ ವಿವಿ ಬೆಳೆಯಲು ಕಾರಣವಾಗಿದೆ ಎಂದು ಸ್ಮರಿಸಿದರು.
ಜಗತ್ತಿನ ಮೂಲೆ ಮೂಲೆಯಲ್ಲಿ ಸಾಧಕ ಭಾರತೀಯರು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಇಂಜಿನಿಯರ್, ಡಾಕ್ಟರ್‌ಗಳು, ಪ್ರೊಫೆಸರ್‌ಗಳು ಭಾರತೀಯರಾಗಿರುತ್ತಾರೆ. ಅಲ್ಲದೆ, ವಿಶ್ವದ 500ಕ್ಕೂ ಹೆಚ್ಚು ಅತಿ ದೊಡ್ಡ ಕಂಪನಿಗಳಲ್ಲಿ ಭಾರತೀಯರದೇ ಪಾರಮ್ಯ. ಇದು ಭಾರತದ ಶೈಕ್ಷಣಿಕ ವ್ಯವಸ್ಥೆಯನ್ನು ಸೂಚಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಬೆಂಗಳೂರು, ಮೈಸೂರು ನಂತರ ತುಮಕೂರಿನಲ್ಲಿ ಅತಿ ಹೆಚ್ಚು ವಿದ್ಯಾ ಸಂಸ್ಥೆಗಳಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಸಾಲಿಗೆ ತುಮಕೂರು ಜಿಲ್ಲೆ ನಿಲ್ಲಲಿದೆ ಎಂದು ಡಿಸಿಎಂ ಹೇಳಿದರು.
ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ದೇಶದ ಸಾಕ್ಷರತೆ ಪ್ರಮಾಣ ಶೇ. 12 ರಷ್ಟಿತ್ತು. ಹಿಂದೆ ಶೋಷಿತ ಸಮುದಾಯಗಳವರು ಅಕ್ಷರಾಭ್ಯಾಸಕ್ಕೆ ಸಾಕಷ್ಟು ತೊಡಕಿತ್ತು. ಸ್ವಾತಂತ್ರ್ಯ ನಂತರ ನೆಹರು ಅವರು ಪಂಚವಾರ್ಷಿಕ ಯೋಜನೆಯಡಿ ಶಿಕ್ಷಣಕ್ಕೆ ಕೊಟ್ಟ ಆದ್ಯತೆಯಿಂದಾಗಿ, ಶೇ 80ರಷ್ಟು ಭಾರತೀಯರು ಸಾಕ್ಷರರಾಗಲು ಸಾಧ್ಯವಾಗಿದೆ. ಎನ್ ಇಪಿ ಗೊಂದಲ ನಡುವೆ ಯೂ ಗುಣಮಟ್ಟದ ಶಿಕ್ಷಣ ಸಂಶೋಧನೆ ಗೆ ರಾಜ್ಯದ ವಿವಿಗಳು ಒತ್ತು ಕೊಡುತ್ತಾ ಬಂದಿವೆ. ತುಮಕೂರು ವಿವಿಯ ಅಧ್ಯಾಪಕರು, ಸಂಶೋಧಕರ ಪ್ರಬಂಧಗಳು ಅಂತರಾಷ್ಟ್ರೀಯ ಮಟ್ಟದಲ್ಲಿ 151ಕ್ಕೂ ಹೆಚ್ಚು ಪ್ರಕಟಗೊಂಡಿರುವುದು ಅಕಾಡೆಮಿಕ್ ವಲಯದಲ್ಲಿ ಮಹತ್ವದ ಸಾಧನೆಯೆನಿಸಿದೆ.
— ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


