ವರದಿ:ಹಾದನೂರು ಚಂದ್ರ
ಸರಗೂರು: ಪಟ್ಟಣದಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ತಂದು ಮಾರಾಟ ಮಾಡುತ್ತಿದ್ದ ದಂಧೆಯನ್ನು ಭೇದಿಸಿರುವ ಸರಗೂರು ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 2,880 ಲಾಟರಿ ಟಿಕೆಟ್‌ಗಳು ಹಾಗೂ ₹1.44 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಪಟ್ಟಣದ ನಿವಾಸಿಗಳಾದ ‘ತರಕಾರಿ ಮಂಜು’ ಹಾಗೂ ರಮೇಶ್ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಸರಗೂರು ಠಾಣೆಯ ಪಿಎಸ್‌ಐ ಆರ್. ಕಿರಣ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಪಕ್ಕದ ವಿ.ವಿ. ಬಡಾವಣೆಯಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪಿಎಸ್‌ಐ ಆರ್. ಕಿರಣ್ ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ಕೃಷ್ಣಕುಮಾರ್, ಸಿಬ್ಬಂದಿಗಳಾದ ಇಮ್ರಾನ್ ಅಹಮದ್, ಚಂದ್ರ, ರಾಜು, ಶಿವರಾಜು, ರಮೇಶ್, ದೇವರಾಜು, ಸತೀಶ್, ಜಗದೀಶ್ ಶೆಟ್ಟರು, ರಾಜೇಶ್, ಅಂಬರೀಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗಡಿಪಾರಿಗೆ ಸಾರ್ವಜನಿಕರ ಆಗ್ರಹ
ಬಂಧಿತ ಆರೋಪಿಗಳು ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಕೇರಳದಿಂದ ಲಾಟರಿ ತಂದು ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಏಜೆಂಟರನ್ನು ನೇಮಿಸಿಕೊಂಡು ಮಾರಾಟ ಮಾಡುತ್ತಿದ್ದರು. ಹಿಂದೆ ಹಲವು ಬಾರಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೂ, ಜಾಮೀನಿನ ಮೇಲೆ ಹೊರಬಂದು ಮತ್ತೆ ಇದೇ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಈ ಆರೋಪಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೇರಳ ಲಾಟರಿ ಮಾರಾಟಕ್ಕೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಸಾರ್ವಜನಿಕರ ದೂರಿನನ್ವಯ ಕ್ರಮ ಜರುಗಿಸಲಾಗಿದೆ. ಈ ದಂಧೆಯಲ್ಲಿ ಇನ್ನು ಕೆಲವರು ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಿದ್ದು, ಅವರನ್ನು ಬಂಧಿಸಲು ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.”
— ಆರ್. ಕಿರಣ್, ಪೊಲೀಸ್ ಉಪನಿರೀಕ್ಷಕರು, ಸರಗೂರು ಠಾಣೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


