ತಿಪಟೂರು: ನಗರದ ಮಂಜುನಾಥ ನಗರದಲ್ಲಿ ಜುಲೈ 27ರಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಶ್ವಥ್ ನಾರಾಯಣ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ಅಡೆತಡೆ ಉಂಟುಮಾಡುತ್ತಿದೆ ಎಂದು ಅಶ್ವಥ್ ನಾರಾಯಣ್ ಗಂಭೀರವಾಗಿ ಆರೋಪಿಸಿದ್ದಾರೆ.
ತಿಪಟೂರು ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ನಗರ ಪ್ರದೇಶದಲ್ಲಿ ಸ್ಥಳೀಯ ಆಡಳಿತದಿಂದ ಸೂಕ್ತ ಅನುಮತಿ ಪಡೆದೇ ಪ್ರಚಾರದ ಬ್ಯಾನರ್ಗಳನ್ನು ಹಾಕಲಾಗಿತ್ತು. ಆದರೆ, ‘ನನ್ನ ಬೆಳವಣಿಗೆಯನ್ನು ಸಹಿಸದ ಕೆಲವರು ತಾಲೂಕು ಆಡಳಿತ ಮತ್ತು ಅಧಿಕಾರಿಗಳನ್ನು ತಮ್ಮ ಕೈಗೊಂಬೆಯಾಗಿಸಿಕೊಂಡು ನಾವು ಹಾಕಿದ್ದ ಬ್ಯಾನರ್ಗಳನ್ನು ತೆರವುಗೊಳಿಸಿದ್ದಾರೆ’ ಎಂದು ಅವರು ಕಟುವಾಗಿ ಕಿಡಿಕಾರಿದ್ದಾರೆ.
ಜುಲೈ 27ರ ಕಾರ್ಯಕ್ರಮದಲ್ಲಿ ಸುಮಾರು 10 ರಿಂದ 12 ಸಾವಿರಕ್ಕೂ ಹೆಚ್ಚು ಜನರು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ. ಅವರಿಗೆ ‘ಭಾಗಿನ’ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬೃಹತ್ ಕಾರ್ಯಕ್ರಮಕ್ಕೂ ತಾಲೂಕು ಆಡಳಿತ ಅನಗತ್ಯವಾಗಿ ತೊಂದರೆ ನೀಡುತ್ತಿದೆ ಎಂದು ಅವರು ಹೇಳಿದರು.
ಉಚಿತ ನೋಟ್ ಬುಕ್ ವಿತರಣೆಗೂ ತಡೆ:
ತಾಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸುವ ಸಾಮಾಜಿಕ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಈ ಶೈಕ್ಷಣಿಕ ನೆರವಿನ ಕಾರ್ಯಕ್ರಮಕ್ಕೂ ತಡೆಯೊಡ್ಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರೀತಿ ಗೆಲ್ಲುತ್ತೋ, ಜಾತಿ ಗೆಲ್ಲುತ್ತೋ ಕಾದು ನೋಡಿ!
ಗ್ರಾಮ ಪಂಚಾಯಿತಿ ಪಿಡಿಒಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. “ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಜಾತಿ ಗೆಲ್ಲುತ್ತೋ’ ಅಥವಾ ‘ಪ್ರೀತಿ ಗೆಲ್ಲುತ್ತೋ’ ಎಂಬುದು ತಾಲೂಕು ಆಡಳಿತ ಹಾಗೂ ಜನತೆಗೆ ತಿಳಿಯಲಿದೆ. ಎಷ್ಟೇ ಅಡೆತಡೆಗಳು, ರಾಜಕೀಯ ಒತ್ತಡಗಳು ಬಂದರೂ ನಿಗದಿತ ದಿನದಂದು ಕಾರ್ಯಕ್ರಮವನ್ನು ಮಾಡಿಯೇ ತೀರುತ್ತೇನೆ” ಎಂದು ಅಶ್ವಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಿರೂಪಾಕ್ಷ, ಬಸವರಾಜು, ಗೊಲ್ಲ ಸಮಾಜದ ಮುಂಜುನಾಥ್ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


