ತಿಪಟೂರು: ರಾಜ್ಯದ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿ, ಆದಿಜಾಂಬವ ಮಾದಿಗ ಸಮುದಾಯದ ಮಠಾಧೀಶರ ವೇದಿಕೆ ವತಿಯಿಂದ ಕೋಡಿಹಳ್ಳಿ ಆದಿಜಾಂಬವ ಸೇವಾಶ್ರಮದ ಶ್ರೀ ಷಡಕ್ಷರ ಮುನಿಮಹಾಸ್ವಾಮೀಜಿಗಳ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸ್ವಾಮೀಜಿಗಳು ನೊಣವಿನಕೆರೆ ಅಜ್ಜಯ್ಯನವರಿಗೆ ಗುರುವಂದನೆ ಸಲ್ಲಿಸಿ ಭಿನ್ನವತ್ತಳೆ ಅರ್ಪಿಸಿದರು.
ಸಮಾಜದಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಮುಖ್ಯವಾಹಿನಿಯಲ್ಲಿರುವ ಮಠಮಾನ್ಯಗಳು ಶ್ರಮಿಸಬೇಕು ಎಂದು ಷಡಕ್ಷರಮುನಿ ಮಹಾಸ್ವಾಮೀಜಿಗಳು ತಿಳಿಸಿದರು.
ಆರ್ಥಿಕವಾಗಿ ಸಬಲವಾಗಿರುವ ಮಠಗಳು ಸಣ್ಣಪುಟ್ಟ ಸಮಾಜಗಳ ಮಠಗಳನ್ನು ತಮ್ಮೊಂದಿಗೆ ಕೊಂಡೊಯ್ಯುವ ಮೂಲಕ ಧರ್ಮವನ್ನು ಉಳಿಸಿ, ಸಮಾಜವನ್ನು ಬಲಗೊಳಿಸುವ ಕೆಲಸ ಮಾಡಬೇಕು ಎಂದರು.
ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ, ಸಮುದಾಯದ ಮುಖಂಡ ಹಾಗೂ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಅಜ್ಜಯ್ಯನವರಲ್ಲಿ ಮನವಿ ಮಾಡಿದರು.
ರಾಜ್ಯದ ಮಾದಿಗ ಸ್ವಾಮೀಜಿಗಳ ಒಕ್ಕೂಟದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳು (ನೊಣವಿನಕೆರೆ ಅಜ್ಜಯ್ಯ), “ಷಡಕ್ಷರಮುನಿ ಸ್ವಾಮೀಜಿಯವರ ಮಾತಿನಲ್ಲಿ ಸತ್ಯವಿದೆ. ಸತ್ಯ ಉಳಿದರೆ ಧರ್ಮಕ್ಕೆ ಜಯ. ಹಾಗಾಗಿ ಮನವಿಯನ್ನು ಈಡೇರಿಸುವ ನಿಟ್ಟಿನಲ್ಲಿ ಸೂಕ್ತವಾಗಿ ಸೂಚಿಸುತ್ತೇನೆ” ಎಂದು ತಿಳಿಸಿದರು.
ನಂತರ ಕಾಡಸಿದ್ದೇಶ್ವರ ಮಠದ ವತಿಯಿಂದ ಆದಿಜಾಂಬವ, ಮಾತಂಗ ಹಾಗೂ ಮಾದಿಗ ಸಮುದಾಯದ ಸ್ವಾಮೀಜಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ವಿವಿಧ ಮಠಗಳ ಮುಖಂಡರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
